Flash News

ಉದ್ಯಮಿ ಬಿ ಎಂ ಫಾರೂಕ್ ಅವರಿಗೆ ಗೌರವ ಡಾಕ್ಟರೇಟ್

​ತುಳುನಾಡಿನ ಮಣ್ಣಿನ ಹೆಮ್ಮೆಯ ಪುತ್ರ, ರಾಜ್ಯ ಕಂಡ ಅತ್ಯುತ್ತಮ ಉದ್ಯಮಿ ಮತ್ತು ವಿಧಾನಪರಿಷತ್ ಸದಸ್ಯ ಬಿ. ಎಂ. ಫಾರೂಕ್ ಅವರಿಗೆ ಬೆಂಗಳೂರು ನಗರ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

ಐದನೇ ಘಟಿಕೋತ್ಸವ ದಿನವಾದ ಇಂದು ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್, ಡಾ. ಎಂ ಮೋಹನ್ ಆಳ್ವ ಜತೆ ಬಿಎಮ್ ಫಾರೂಕ್ ಅವರಿಗೂ ಗೌಡಾ ಪ್ರದಾನ ಮಾಡಿದರು.

ಫಾರೂಕ್ ತಂದೆ ದಿವಂಗತ ಹಾಜಿ ಅಹಮದ್ ಬಾವಾ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದರು ಮತ್ತು ತಾಯಿ ದಿವಂಗತ ಆಯಿಷಮ್ಮ ಕುಟುಂಬದ ಪೋಷಕಿ. ಬಿ ಎಂ ಪಾರುಕ್ ಪೂರ್ಣ ಹೆಸರು ಬಾವಾ ಮೊಹಮ್ಮದ್ ಫಾರೂಕ್. ಫಾರೂಕ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಎಂಬಿಎ (MBA) ಪದವಿ ಪಡೆದಿದ್ದಾರೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ‘ಫಿಜಾ ಗ್ರೂಪ್’ ಮೂಲಕ ಭಾರತದಲ್ಲಿ ಕ್ರಾಂತಿ ಮಾಡಿದವರು. ಕೇವಲ ವ್ಯವಹಾರವನ್ನಷ್ಟೇ ಗುರಿಯಾಗಿಸಿಕೊಳ್ಳದೆ, ಪರಿಸರ ಸ್ನೇಹಿ ಭಾರತವನ್ನು ನಿರ್ಮಿಸುವ ಇವರ ದೂರದೃಷ್ಟಿಗೆ ಭಾರತ ಸರ್ಕಾರವು ‘ರಾಜೀವ್ ಗಾಂಧಿ ಊರ್ಜಾ ದಿವಸ್’ ಪ್ರಶಸ್ತಿ ನೀಡಿ ಗೌರವಿಸಿರುವುದು ಇವರ ಸಾಧನೆಗೆ ಸಾಕ್ಷಿಯಾಗಿದೆ.

​ರಾಜಕೀಯ ರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಬಿ. ಎಂ. ಫಾರೂಕ್ ಅವರು, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಮತ್ತು ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕೇವಲ ಅಧಿಕಾರಕ್ಕಾಗಿ ರಾಜಕೀಯ ಮಾಡದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ಹಂಬಲ ಹೊಂದಿರುವ ಇವರು ಮಾನವ ಹಕ್ಕುಗಳ ರಕ್ಷಣೆಗಾಗಿ ಸತತವಾಗಿ ಶ್ರಮಿಸುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿನಿಧಿಯಾಗಿ ಹವಾಮಾನ ಬದಲಾವಣೆಯ ಕುರಿತು ಧ್ವನಿ ಎತ್ತಿದ ಹೆಗ್ಗಳಿಕೆ ಇವರದ್ದು.
​ಬಿ. ಎಂ. ಫಾರೂಕ್ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲವೆಂದರೆ ಅವರ ವಿಶಾಲ ಹೃದಯ ಮತ್ತು ಸಮುದಾಯ ಪ್ರೇಮ.
ಕೊಡುಗೈ ದಾನಿ ಎಂದೇ ಖ್ಯಾತರಾಗಿರುವ ಇವರು ಬ್ಯಾರಿ ಸಮುದಾಯದ ಏಳಿಗೆಗಾಗಿ ಬೆಂಗಳೂರಿನಲ್ಲಿ ‘ಬ್ಯಾರಿಸ್ ಸೌಹಾರ್ದ ಭವನ’ವನ್ನು ನಿರ್ಮಿಸುವಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ.
ಕೋಟಿಗಟ್ಟಲೆ ಆಸ್ತಿಯಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಡವರೊಂದಿಗೆ ಕುಳಿತು ಊಟ ಮಾಡುವ ಇವರ ಸರಳತೆ ಮತ್ತು ಸೇವಾ ಮನೋಭಾವವು ಇವರನ್ನು ಇಂದಿನ ಕಾಲದ ನಿಜವಾದ ಸಮಾಜ ಸೇವಕರನ್ನಾಗಿ ಮಾಡಿದೆ.