ಮಂಗಳೂರು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ನಡೆಯುವ ಗುರುಪುರ ಕಂಬಳ ಎಂದು ಪ್ರಸಿದ್ಧಿ ಪಡೆದಿರುವ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಏಪ್ರಿಲ್ 4 ಶನಿವಾರ ಆರಂಭಗೊಂಡು ಏ.5ರ ಭಾನುವಾರ ತನಕ ನಡೆಯಲಿದೆ.
ತೃತೀಯ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳದ ಆಮಂತ್ರಣ ಪತ್ರಿಕೆಯನ್ನು ಇಂದು ಮಧ್ಯಾಹ್ನ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ, ತುಳುನಾಡಿನ ಮಣ್ಣಿಗೂ ಕಂಬಳಕ್ಕೂ ಅವಿನಾಭವ ಸಂಬಂಧ ಇದ್ದು, ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಉತ್ಸವದ ರೀತಿಯಲ್ಲಿ ಗುರುಪುರ ಕಂಬಳವನ್ನು ಆಯೋನಿಸಲಾಗಿದೆ ಎಂದರು. ಏ.4ರಂದು ಸಂಜೆ ನಡೆಯುವ ಗುರುಪುರ ಕಂಬಳದ ಸಭಾ ಕಾರ್ಯಕ್ರಮವನ್ನು ಬಮುಲ್ ಅಧ್ಯಕ್ಷರಾದ ಡಿ.ಕೆ ಸುರೇಶ್ ಉದ್ಘಾಟಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಬಾರಿ ಹೆಚ್ಚಿನ ಕೋಣಗಳು ಕಂಬಳದಲ್ಲಿ ಭಾಗಿಯಾಗಲಿದ್ದು ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ಮಾಣಿಬೆಟ್ಟುಗುತ್ತು ಮಾತನಾಡಿ, ಇನಾಯತ್ ಅಲಿ ಅವರ ನೇತೃತ್ವದಲ್ಲಿ ಎರಡು ವರ್ಷ ಶಿಸ್ತುಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ನಡೆದಿರುವ ಗುರುಪುರ ಕಂಬಳ ಈ ಬಾರಿ ಅತ್ಯುತ್ತಮವಾಗಿ ಆಯೋಜನೆಗೊಳ್ಳಲಿದೆ ಎಂದರು. ರಾಜ್ಯ ಕಂಬಳ ಅಸೋಸಿಯೇಷನ್ ಅಡಿಯಲ್ಲಿ ನಡೆಯುವ ಕಂಬಳದಲ್ಲಿ ಸೆನ್ಸಾರ್ ವ್ಯವಸ್ಥೆ ಇದ್ದು, ಕೋಣದ ಮಾಲಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಮಾತನಾಡಿ, ಗುರುಪುರ ಕಂಬಳವನ್ನು ಇನಾಯತ್ ಅಲಿ ಅವರು ವಿಶಿಷ್ಟವಾಗಿ ಆಯೋಜಿಸಿದ್ದಾರೆ ಎಂದರು.
ಏ.4ರಂದು ಬೆಳಗ್ಗೆ 8.30ಕ್ಕೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಂಬಳವನ್ನು ಉದ್ಘಾಟಿಸಲಿದ್ದಾರೆ. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಾಡೋಜ ಡಾ ಜಿ.ಶಂಕರ್, ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೇರಿಂದತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಗುರುಪುರ ಕಂಬಳದ ವಿಶೇಷತೆ
- ಕನೆ ಹಲಗೆ, ಹಗ್ಗ ವಿಭಾಗ(ಹಿರಿಯ-ಕಿರಿಯ), ನೇಗಿಲು ವಿಭಾಗ (ಹಿರಿಯ-ಕಿರಿಯ) ಮತ್ತು ಅಡ್ಡ ಹಲಗೆ ವಿಭಾಗದಲ್ಲಿ ಬಹುಮಾನ
- ಕನೆ ಹಲಗೆ ವಿಭಾಗದಲ್ಲಿ ನೀರು ಹಾಯಿಸಿದ ಎಲ್ಲಾ ಕೋಣಗಳಿಗೆ 1 ಗ್ರಾಂ ಚಿನ್ನದ ಪದಕ
- ಭಾಗವಹಿಸಿದ ಎಲ್ಲಾ ಕೋಣಗಳ ಮಾಲೀಕರಿಗೆ ಬೆಳ್ಳಿ ನಾಣ್ಯ ಉಡುಗೊರೆ
- ಕೋಣಗಳಿಗೆ 1 ಬ್ಯಾಗ್ ಹುರುಳಿ ವಿತರಣೆ
- ಬಿಸಿಲಿನ ತಾಪ ತಡೆಯಲು ಜರ್ಮನ್ ಟೆಂಟ್ ಅಳವಡಿಕೆ
- ಕಂಬಳದ ಜೊತೆ ಯಕ್ಷಗಾನ ಆಯೋಜನೆ
- ಎರಡು ದಿನಗಳ ಕಾಲ ಅನ್ನದಾನ ನಡೆಯಲಿದೆ
- ಕಂಬಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
- ಪ್ರಸಿದ್ಧ ಕೇರಳ ಚೆಂಡೆವಾದನ ಮತ್ತು ಸುಡುಮದ್ದು ಪ್ರದರ್ಶನ
- ಖ್ಯಾತ ಚಲನಚಿತ್ರ ನಟ-ನಟಿಯರ ಸಮಾಗಮ



