Flash News

‘ಕುಂಭ ಮೇಳದ ಹುಡುಗಿ’ ಮೊನಾಲಿಸಾಳನ್ನು ಮದುವೆಯಾದ ಹುಡುಗ ಯಾರು?

ತಿರುವನಂತಪುರ: ಮಹಾಕುಂಭಮೇಳದ ಮೂಲಕ ‘ಕುಂಭ ಮೇಳದ ಹುಡುಗಿ’ ಎಂದೇ ಖ್ಯಾತರಾಗಿದ್ದ 18 ವರ್ಷದ ಮೊನಾಲಿಸಾ ಭೋಸ್ಲೆ ಅವರು ತಮ್ಮ ಗೆಳೆಯ ಫರ್ಮಾನ್ ಖಾನ್ ಅವರೊಂದಿಗೆ ಕೇರಳದ ಪೂವಾರ್‌ನ ಅರುಮನೂರು ಶ್ರೀ ನೈನಾರ್ ದೇವ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ವರದಿಗಳ ಪ್ರಕಾರ, ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಮತ್ತು ಮಹಾರಾಷ್ಟ್ರದ ಫರ್ಮಾನ್ ಅವರು ಆರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದರು.ಇಬ್ಬರೂ ಭಿನ್ನ ಧರ್ಮೀಯರಾಗಿರುವುದರಿಂದ ಮೊನಾಲಿಸಾ ಅವರ ತಂದೆ ಜೈ ಸಿಂಗ್ ಭೋಸ್ಲೆ ಅವರಿಂದ ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ದೂರದ ಸಂಬಂಧಿಯೊಬ್ಬರೊಂದಿಗೆ ಬಲವಂತದ ಮದುವೆಗೆ ಅವರು ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.

ಮೊನಾಲಿಸಾಳನ್ನು ಬಲವಂತವಾಗಿ ಕರೆದೊಯ್ಯಲು ಬಂದಿದ್ದ ತಂದೆ

ಮೊನಾಲಿಸಾ ಇತ್ತೀಚೆಗೆ ಪೂವಾರ್‌ನಲ್ಲಿ ತನ್ನ ಚೊಚ್ಚಲ ಮಲಯಾಳ ಚಿತ್ರ ‘ನಾಗಮ್ಮ’ ಚಿತ್ರೀಕರಣದಲ್ಲಿದ್ದಾಗ, ಆಕೆಯ ತಂದೆ ಅವಳನ್ನು ಪತ್ತೆಹಚ್ಚಿ ಬಲವಂತವಾಗಿ ತಮ್ಮ ಊರಿಗೆ ಕರೆದೊಯ್ಯಲು ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ. ಘಟನೆಯ ನಂತರ, ಮೊನಾಲಿಸಾ ಮತ್ತು ಫರ್ಮಾನ್ ರಕ್ಷಣೆ ಕೋರಿ ಕೇರಳ ರಾಜಧಾನಿಯ ಥಂಪನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಕೆಯ ದೂರು ದಾಖಲಿಸಿಕೊಂಡ ನಂತರ, ತಂದೆಯನ್ನು ಪೊಲೀಸ್ ಠಾಣೆಗೆ ಕರೆಸಿ, ಮೊನಾಲಿಸಾಗೆ 18 ವರ್ಷ ತುಂಬಿರುವುದರಿಂದ, ತಾನು ಯಾರೊಂದಿಗೆ ಇರಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ ಎಂದು ಪೊಲೀಸರು ಮನವರಿಕೆ ಮಾಡಿದ್ದರು ಎಂದು ವರದಿ ತಿಳಿಸಿದೆ.

ಬಳಿಕ, ಸಂಗಾತಿ ಜೊತೆ ಹೊರಟಿದ್ದ ಮೊನಾಲಿಸಾ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಕೇರಳದ ಹಲವು ಗಣ್ಯ ವ್ಯಕ್ತಿಗಳು ವಿವಾಹದಲ್ಲಿ ಹಾಜರಾಗಿ ಮೊನಾಲಿಸಾಗೆ ಬೆಂಬಲ ಸೂಚಿಸಿದ್ದಾರೆ. ಕೇರಳ ಶಿಕ್ಷಣ ಸಚಿವ ವಿ. ಶಿವಶೆಟ್ಟಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಂಸದ ಎಎ ರಹೀಮ್ ಉಪಸ್ಥಿತರಿದ್ದರು.

ಮದುವೆಯಲ್ಲಿ ಮೊನಾಲಿಸಾ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿದ್ದರು. ವರ ಸಾಂಪ್ರದಾಯಿಕ ಬಿಳಿ ಶರ್ಟ್ ಮತ್ತು ಮುಂಡು ಧರಿಸಿದ್ದರು.