Flash News

ಬಂಗಾರಪೇಟೆ | ಬೆಲೆ ಕುಸಿತ: ರಸ್ತೆಗೆ ಹೂವು ಚೆಲ್ಲಿದ ರೈತರು

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹೂವಿನ ಬೆಲೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಕುಸಿದ ಕಾರಣದಿಂದಾಗಿ, ಸೋಮವಾರ ಮಾರುಕಟ್ಟೆಗೆ ತಂದಿದ್ದ ಹೂವುಗಳನ್ನು ಬೆಳೆಗಾರರು ರಸ್ತೆ ಬದಿಯಲ್ಲಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲು ಸಾಲು ಹಬ್ಬಗಳು ಮುಗಿದ ನಂತರ ಹೂವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಗಿದೆ. ಹೂವು ಕೀಳಲು ತಗಲುವ ಕೂಲಿ ವೆಚ್ಚ ಮತ್ತು ಸಾಗಾಟದ ಖರ್ಚು ಕೂಡ ಭರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಸ್ತುತ, ಬಹುತೇಕ ಎಲ್ಲ ಹೂವುಗಳ ಬೆಲೆ ಕುಸಿತ ಕಂಡಿದ್ದು, ಒಂದು ಕೆ.ಜಿ ಚೆಂಡು ಹೂವಿನ ಬೆಲೆ ₹10, ಸೇವಂತಿಗೆ ₹10–₹20, ಮತ್ತು ಗುಲಾಬಿ ₹30 ಕ್ಕೆ ಕುಸಿದಿದೆ. ಕೆಲವು ಹೂವುಗಳಿಗೆ ₹3 ರಿಂದ ₹5 ರಷ್ಟಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಒಂದು ಎಕರೆ ಚೆಂಡು ಹೂ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದರೂ, ಈಗಿನ ಬೆಲೆಯಲ್ಲಿ ಹೂ ಕೀಳುವ ಕೂಲಿ ಹಣವೂ ಬರುತ್ತಿಲ್ಲ ಎಂದು ಬೆಳೆಗಾರರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಅಕ್ಟೋಬರ್ 6, 2025 ರಂದು 6:09 IST ಕ್ಕೆ ಪ್ರಕಟವಾಗಿದೆ.