ನವೀನ್ ಸೂರಿಂಜೆ
ಬಿಸಿ ರೋಡಿನಲ್ಲಿ ನಡೆದ ಯುವತಿಯ ಬರ್ಬರ ಹತ್ಯೆಯನ್ನು ಖಂಡಿಸಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಹೇಳಿಕೆ ನೀಡಿದೆ. ಅವಕಾಶ ಸಿಕ್ಕರೆ ಮಹಿಳೆಯ ಮೇಲೆ ಹಲ್ಲೆ ಮಾಡುವ, ಕೊಲೆ ಮಾಡುವ, ಮಾರಲ್ ಪೊಲೀಸಿಂಗ್ ಮಾಡುವ ಮನಸ್ಥಿತಿಯ ಮತಾಂಧ, ಕೋಮುವಾದಿ ಸಂಘಟನೆಗಳೂ ಕೂಡಾ ಘಟನೆಯನ್ನು ಖಂಡಿಸಿದೆ. ಕೆಲ ಸಂಘಟನೆಗಳು, ವ್ಯಕ್ತಿಗಳು ಕೊಲೆಯ ಹಿಂದಿನ ಕಾರಣಗಳನ್ನು ‘ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು’ ಆರೋಪಿಯನ್ನು ಎನ್ ಕೌಂಟರ್ ಮಾಡಿ ಎಂದು ಒತ್ತಾಯಿಸಿ ಚಪ್ಪಾಳೆ (ವಿವರ್ ಶಿಪ್) ಗಿಟ್ಟಿಸುತ್ತಿದ್ದಾರೆ. ಸಿಪಿಐಎಂ ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಅವರು ಹೊರಡಿಸಿದ ಪತ್ರಿಕಾ ಹೇಳಿಕೆ ಮಾತ್ರ ‘ಯುವತಿಯ ಕೊಲೆಗೆ ಕಾರಣಗಳೇನು’ ಎಂಬುದನ್ನು ಹೇಳುತ್ತದೆ.
ಒಬ್ಬ ಯುವಕ ಸಾರ್ವಜನಿಕವಾಗಿ ಯುವತಿಯನ್ನು ಕೊಲ್ಲುವ ಧೈರ್ಯ ಎಲ್ಲಿಂದ ಬರುತ್ತದೆ? ಆ ಧೈರ್ಯವನ್ನು ಅವನಿಗೆ ಕೊಟ್ಟಿರುವುದು ಕೇವಲ ವೈಯಕ್ತಿಕ ಕ್ರೌರ್ಯವೇ, ಅಥವಾ ಹೆಣ್ಣನ್ನು ತನ್ನ ಭೋಗದ ಆಸ್ತಿಯಂತೆ ನೋಡುವ ಸಮಾಜವೇ? ಈ ಪ್ರಶ್ನೆಗೆ ಉತ್ತರ ಹುಡುಕದೆ, ಕೇವಲ ಆರೋಪಿಯನ್ನು ಕೊಂದುಬಿಟ್ಟರೆ ಸಮಾಜ ಸುರಕ್ಷಿತವಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಸಿಪಿಐಎಂ ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಅವರು ಹೊರಡಿಸಿರುವ ಪತ್ರಿಕಾ ಹೇಳಿಕೆ ಗಮನಾರ್ಹ. ಅವರು ಮಹಿಳೆಯರ ಮೇಲಿನ ಹಿಂಸೆಯನ್ನು ಕೇವಲ ಒಂದು ಅಪರಾಧ ಪ್ರಕರಣವಾಗಿ ಮಾತ್ರ ನೋಡದೆ, ಮಹಿಳೆಯನ್ನು ಕೀಳಾಗಿ ಕಾಣುವ ಪುರುಷಪ್ರಧಾನ ಸಮಾಜದ ಮನೋಭಾವ, ಸಾಮಾಜಿಕ ಅಸಮಾನತೆ ಮತ್ತು ಮಾನವೀಯ ಮೌಲ್ಯಗಳ ಕುಸಿತದ ಪರಿಣಾಮವಾಗಿ ನೋಡಬೇಕು ಎಂದು ಹೇಳಿದ್ದಾರೆ. ಇದೇ ಚರ್ಚೆ ಸಮಾಜದಲ್ಲಿ ಹೆಚ್ಚಾಗಬೇಕಾಗಿದೆ.
ಸಿಪಿಐಎಂ ಪತ್ರಿಕಾ ಹೇಳಿಕೆ ಹೀಗೆ ಹೇಳುತ್ತದೆ. ” “ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಹಿಂಸಾಚಾರವನ್ನು ಕೇವಲ ಅಪರಾದ ಕೃತ್ಯವನ್ನಾಗಿ ಮಾತ್ರ ನೋಡದೆ, ಮಹಿಳೆಯನ್ನು ಅತ್ಯಂತ ಕೀಳಾಗಿ ಕಾಣುವ ಪುರುಷಪ್ರದಾನ ಸಮಾಜದ ಕೀಳು ಮನೋಭಾವ, ಸಾಮಾಜಿಕ ಅಸಮಾನತೆ ಮತ್ತು ಮಾನವೀಯ ಮೌಲ್ಯಗಳ ಕುಸಿತದ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ಸ್ವಾತಂತ್ರ್ಯ, ಸಮಾನತೆ ಮತ್ತು ಬದುಕುವ ಹಕ್ಕನ್ನು ಗೌರವಿಸದ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಆದ್ದರಿಂದ ಮಹಿಳಾ ವಿರೋಧಿ ಮನೋಭಾವವನ್ನು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಎದುರಿಸುವುದು ಅತ್ಯಗತ್ಯ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸ್ತ್ರೀವಾದ ಬಹಳ ಹಿಂದೆಯೇ ಒಂದು ಮೂಲಭೂತ ಸಂಗತಿಯನ್ನು ಹೇಳಿದೆ. ಮಹಿಳೆಯರ ಮೇಲಿನ ಹಿಂಸೆ ಎನ್ನುವುದು ಕೇವಲ ಯಾರೋ ಒಂದಿಬ್ಬರು “ಕೆಟ್ಟ ವ್ಯಕ್ತಿಗಳ” ಸಮಸ್ಯೆಯಲ್ಲ. ಅದು ಪಿತೃಪ್ರಭುತ್ವದ ಸಾಮಾಜಿಕ ವ್ಯವಸ್ಥೆಯ ಉತ್ಪನ್ನ. ಹೆಣ್ಣು ತನ್ನ ಇಚ್ಛೆಯಂತೆ ಬದುಕಬಾರದು, ಪ್ರೀತಿಸಬಾರದು, ನಿರಾಕರಿಸಬಾರದು, ಸ್ವತಂತ್ರವಾಗಿ ಸಂಚರಿಸಬಾರದು ಎಂಬ ಕಲ್ಪನೆಗಳನ್ನು ಬಾಲ್ಯದಿಂದಲೇ ಹುಡುಗರ ಮನಸ್ಸಿನಲ್ಲಿ ಬಿತ್ತಲಾಗುತ್ತದೆ. ಹುಡುಗಿಯೊಬ್ಬಳು ನೀಡುವ “ಇಲ್ಲ” ಎಂಬ ಉತ್ತರವನ್ನು ಒಪ್ಪಿಕೊಳ್ಳುವುದಕ್ಕಿಂತ, ಅದನ್ನು ತನ್ನ ಪುರುಷತ್ವಕ್ಕೆ ಮಾಡಿದ ಅವಮಾನವೆಂದು ನೋಡುವ ಮನಸ್ಥಿತಿ ಬೆಳೆಸಲಾಗುತ್ತದೆ.
ಹೀಗಾಗಿ ಅನೇಕ ಮಹಿಳಾ ಹತ್ಯೆಗಳು, ಆಸಿಡ್ ದಾಳಿಗಳು, ಕಿರುಕುಳಗಳು ಮತ್ತು ಲೈಂಗಿಕ ಹಿಂಸೆಗಳು ಕೇವಲ ಕ್ಷಣಿಕ ಕೋಪದ ಪರಿಣಾಮವಲ್ಲ. ಅವು ಮಹಿಳೆಯ ಮೇಲೆ ಪುರುಷನಿಗೆ ಅಧಿಕಾರವಿದೆ ಎಂಬ ನಂಬಿಕೆಯ ಹಿಂಸಾತ್ಮಕ ಅಭಿವ್ಯಕ್ತಿಗಳು. ಪ್ರೀತಿಯನ್ನು ನಿರಾಕರಿಸಿದ ಮಹಿಳೆಯ ಮೇಲೆ ಸೇಡು ತೀರಿಸಿಕೊಳ್ಳುವುದು, ಹೆಣ್ಣಿನ ಉಡುಗೆ, ವರ್ತನೆ, ಸಂಚಾರದ ಮೇಲೆಯೇ ನಿಯಂತ್ರಣ ಹೇರುವುದು, ಪ್ರೀತಿಸುವವರ ಮೇಲೆ ಮಾರಲ್ ಪೊಲೀಸಿಂಗ್ ಮಾಡುವುದು ಇದೇ ಪಿತೃಪ್ರಭುತ್ವದ ಮುಖಗಳು.
ಆದ್ದರಿಂದ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯಬೇಕಾದರೆ ಕೇವಲ ಕಠಿಣ ಶಿಕ್ಷೆ ಸಾಕಾಗುವುದಿಲ್ಲ. ಶಿಕ್ಷೆ ಅಗತ್ಯವೇ ಸರಿ; ಆದರೆ ಶಿಕ್ಷೆಯ ಭಯ ಮಾತ್ರ ಸಮಾಜವನ್ನು ಬದಲಾಯಿಸುವುದಿಲ್ಲ. ಮಹಿಳೆಯರನ್ನು ಸಮಾನ ಮನುಷ್ಯರಾಗಿ ಕಾಣುವ ಶಿಕ್ಷಣ, ಲಿಂಗ ಸಮಾನತೆಯ ಮೌಲ್ಯಗಳು, ಬಾಲ್ಯದಿಂದಲೇ ಪರಸ್ಪರ ಗೌರವದ ಸಂಸ್ಕೃತಿ, ಮಹಿಳೆಯ ಸ್ವಾಯತ್ತತೆಯನ್ನು ಒಪ್ಪಿಕೊಳ್ಳುವ ಸಾಮಾಜಿಕ ಮನೋಭಾವ ಮತ್ತು ಸ್ತ್ರೀವಾದಿ ಚಿಂತನೆಗಳು ಬರಬೇಕು.
ಎನ್ಕೌಂಟರ್ ಒಂದು ಆರೋಪಿಯ ಜೀವವನ್ನು ತೆಗೆದುಕೊಳ್ಳಬಹುದು. ಆದರೆ ಮತ್ತೊಬ್ಬ ಆರೋಪಿಯನ್ನು ಹುಟ್ಟಿಸುವ ಪಿತೃಪ್ರಭುತ್ವದ ಮನಸ್ಥಿತಿಯನ್ನು ಕೊಲ್ಲುವುದಿಲ್ಲ. ಒಬ್ಬ ಕೊಲೆಗಾರನನ್ನು ಶಿಕ್ಷಿಸುವುದರಿಂದ ನ್ಯಾಯದ ಒಂದು ಭಾಗ ಸಿಗಬಹುದು. ಆದರೆ ಮಹಿಳೆಯರ ಸುರಕ್ಷತೆ ಖಚಿತವಾಗಬೇಕಾದರೆ ಸ್ತ್ರೀದ್ವೇಷ, ಪುರುಷಾಧಿಕಾರ ಮತ್ತು ಮಹಿಳೆಯನ್ನು ಆಸ್ತಿಯಂತೆ ನೋಡುವ ಸಂಸ್ಕೃತಿಯನ್ನೇ ಪ್ರಶ್ನಿಸಿ ಬದಲಾಯಿಸಬೇಕು.
ಮಹಿಳೆಯರ ಮೇಲಿನ ಹಿಂಸೆ ನಿಲ್ಲಬೇಕಾದರೆ ಎನ್ಕೌಂಟರ್ ಆಗಬೇಕಿರುವುದು ಒಬ್ಬ ವ್ಯಕ್ತಿಯದ್ದಲ್ಲ. ಮಹಿಳೆಯ ಸ್ವಾತಂತ್ರ್ಯವನ್ನು ದ್ವೇಷಿಸುವ ಪಿತೃಪ್ರಭುತ್ವದ ಮನಸ್ಥಿತಿಯ ಎನ್ ಕೌಂಟರ್ ಆಗಬೇಕಿದೆ. ಸಮಾಜ ಆ ದಿಕ್ಕಿನಲ್ಲಿ ಹೆಜ್ಜೆ ಇಡದಿದ್ದರೆ, ಇಂತಹ ಹತ್ಯೆಗಳ ನಂತರ ನಾವು ಮತ್ತೆ ಮೇಣದ ಬತ್ತಿ ಹಚ್ಚುತ್ತೇವೆ, ಮತ್ತೆ ಮತ್ತೆ ‘ಎನ್ಕೌಂಟರ್ ಮಾಡಿ’ ಎಂದು ಕೂಗುತ್ತೇವೆ. ಮತ್ತೆ ಮತ್ತೊಂದು ಮಹಿಳೆಯ ಸಾವಿನ ಸುದ್ದಿ ಕೇಳುತ್ತೇವೆ. ಈ ವಿಷವರ್ತುಲ ಮುರಿಯಬೇಕಾದರೆ, ಸಿಪಿಐಎಂ ಪತ್ರಿಕಾ ಹೇಳಿಕೆಯಲ್ಲಿ ಹೇಳಿದಂತೆ ಸ್ತ್ರೀವಾದದ ಸಮಾನತೆಯ ರಾಜಕಾರಣವನ್ನು ಸಮಾಜ ಗಂಭೀರವಾಗಿ ಸ್ವೀಕರಿಸಲೇಬೇಕು.


