Flash News

ತಪ್ಪೊಪ್ಪಿಕೊಂಡು, ಕ್ಷಮೆಯಾಚಿಸುವ ಸಮಯ: ಕರೂರು ಕಾಲ್ತುಳಿತ ಸ್ಥಳಕ್ಕೆ ಕಮಲ್ ಭೇಟಿ

ತಮಿಳುನಾಡಿನ ಕರೂರುನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ರಾಜ್ಯಸಭಾ ಸಂಸದ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್, “ಈ ವಿಷಯವು ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಆದರೆ, ಪ್ರತಿಯೊಬ್ಬರಿಗೂ, ವಿಶೇಷವಾಗಿ ಆಯೋಜಕರಿಗೆ, ಜವಾಬ್ದಾರಿ ಇದೆ. ಇದು ತಪ್ಪೊಪ್ಪಿಕೊಂಡು, ಕ್ಷಮೆಯಾಚಿಸುವ ಸಮಯ” ಎಂದಿದ್ದಾರೆ. ತಮಿಳುನಾಡಿನ ನಾಗರಿಕನಾಗಿ ಯಾವುದೇ ಪಕ್ಷವನ್ನು ವಹಿಸಿ ಮಾತನಾಡುವುದಿಲ್ಲ, ಜನರ ಪಕ್ಷ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಅಲ್ಲದೆ, ಈ ವಿಷಯದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ, ಅದಕ್ಕಾಗಿ ಅವರಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ.

ಸೆಪ್ಟೆಂಬರ್ 27ರಂದು ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ್‍ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು ಮತ್ತು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ಸಂಬಂಧ ಟಿವಿಕೆ ಪಕ್ಷದ ಇಬ್ಬರು ಮುಖಂಡರನ್ನು ಬಂಧಿಸಲಾಗಿದೆ. ಆದರೆ, ಘಟನೆ ನಡೆದು ಮೂರು ವಾರ ಕಳೆದರೂ ಟಿವಿಕೆ ಮುಖ್ಯಸ್ಥ ವಿಜಯ್ ಅವರು ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿಲ್ಲ.