Flash News

‘ಮುಸ್ಲಿಂ ಎಂಬ ಕಾರಣಕ್ಕೆ ಸರ್ಫರಾಜ್ ಕಡೆಗಣನೆ’; ಗಂಭೀರ್ ವಿರುದ್ಧ ಕಾಂಗ್ರೆಸ್ ವಕ್ತಾರೆಯಿಂದ ಆರೋಪ

ಪ್ರಸ್ತುತ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಆ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಆದರೆ ಅದಕ್ಕೂ ಮುನ್ನ ಭಾರತ ಎ ತಂಡ, ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಅನಧಿಕೃತ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ನಿನ್ನೆಯಷ್ಟೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಈ ತಂಡದ ನಾಯಕತ್ವವನ್ನು ರಿಷಭ್ ಪಂತ್​ಗೆ ವಹಿಸಲಾಗಿದೆ. ಆದಾಗ್ಯೂ ಈ ಸರಣಿಗೆ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿ, ಸರ್ಫರಾಜ್ ಕಡಗಣನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು, ಸರ್ಫರಾಜ್ ಆಯ್ಕೆಯಾಗದಿರಲು ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ವಾಸ್ತವವಾಗಿ ಸರ್ಫರಾಜ್ ಖಾನ್ ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧದ ದೇಶೀಯ ಸರಣಿಯಲ್ಲಿ ಭಾರತ ಪರ ಆಡಿದ್ದರು. ಆದರೆ ಆ ಬಳಿಕ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಕೈಬಿಡಲಾಯಿತು. ಆ ವೇಳೆ ಅವರನ್ನು ಕೈಬಿಡಲು ಫಿಟ್ನೆಸ್ ಕಾರಣ ನೀಡಲಾಗಿತ್ತು. ಹೀಗಾಗಿ ತನ್ನ ಫಿಟ್ನೆಸ್ ಮೇಲೆ ಸಾಕಷ್ಟು ಕೆಲಸ ಮಾಡಿದ್ದ ಸರ್ಫರಾಜ್ ಖಾನ್ 15 ಕೆಜಿ ತೂಕ ಇಳಿಸಿಕೊಂಡಿದ್ದರು.

ಆದಾಗ್ಯೂ, ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡಿರಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ದೇಶೀಯ ಸರಣಿಗೂ ಸರ್ಫರಾಜ್ ಖಾನ್ ಅವರನ್ನು ಪರಿಗಣಿಸಲಾಗಿಲ್ಲ. ಇದೀಗ ದಕ್ಷಿಣ ಆಫ್ರಿಕಾ ಎ ವಿರುದ್ಧದ ಸರಣಿಗೆ ಸರ್ಫರಾಜ್ ಖಾನ್ ಅವರನ್ನು ಭಾರತ ಎ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಇದೀಗ ಈ ಬಗ್ಗೆ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ‘ಸರ್ಫರಾಜ್ ಅವರ ಉಪನಾಮದಿಂದಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲವೇ? ಎಂಬ ಪ್ರಶ್ನೆಯನ್ನು ಗೌತಮ್ ಗಂಭೀರ್ ಮುಂದಿಟ್ಟಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಮಾ ಮೊಹಮ್ಮದ್, ‘ಸರ್ಫರಾಜ್ ಖಾನ್ ಅವರನ್ನು ಅವರ ಉಪನಾಮದ ಕಾರಣದಿಂದಾಗಿ ಆಯ್ಕೆ ಮಾಡಲಾಗಿಲ್ಲವೇ? #justasking. ಗೌತಮ್ ಗಂಭೀರ್ ಇದರ ಬಗ್ಗೆ ಏನು ಯೋಚಿಸುತ್ತಾರೆಂದು ನಮಗೆ ತಿಳಿದಿದೆ’ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಅಂದರೆ ಸರ್ಫರಾಜ್ ಖಾನ್ ಒಬ್ಬ ಮುಸ್ಲಿಂ ಸಮುದಾಯದ ಕ್ರಿಕೆಟಿಗನಾಗಿರುವ ಕಾರಣ, ಮಾಜಿ ಬಿಜೆಪಿ ಸಂಸದರಾಗಿರುವ ಹಾಗೂ ಹಾಲಿ ಟೀಂ ಇಂಡಿಯಾ ಕೋಚ್ ಆಗಿರುವ ಗೌತಮ್ ಗಂಭಿರ್ ಸರ್ಫರಾಜ್ ಖಾನ್​ರನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರ ಎಕ್ಸ್​ ಪೋಸ್ಟ್​ನ ಒಳಾರ್ಥ ಎಂಬುದನ್ನು ನಾವು ಅರಿತುಕೊಳ್ಳಬಹುದಾಗಿದೆ. ಇದೀಗ ಶಮಾ ಅವರ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅದು ಯಾವ ರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.