Flash News

ಕರ್ನೂಲ್​ ಬಸ್​ ದುರಂತ; 16 ಬಾರಿ ಟ್ರಾಫಿಕ್​ ಉಲ್ಲಂಘಿಸಿದ್ದ ಬಸ್; 23,120 ರೂ. ದಂಡ ಬಾಕಿ ಉಳಿಸಿಕೊಂಡಿದ್ದ ವಾಹನ

ಹೈದರಾಬಾದ್: ಕರ್ನೂಲ್​ನ ಹೆದ್ದಾರಿಯಲ್ಲಿ ನಡೆದ ಭೀಕರ ಬಸ್​ ಅಗ್ನಿ ಅವಘಡದಲ್ಲಿ ಅನೇಕ ಕುಟುಂಬಗಳನ್ನು ದುಃಖದ ಮಡುವಿನಲ್ಲಿ ಬೀಳುವಂತೆ ಮಾಡಿದೆ. ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಮೆಮುರಿ ಕಾವೇರಿ ಟ್ರಾವೆಲ್ಸ್​, ಬೈಕಿಗೆ ಡಿಕ್ಕಿ ಹೊಡೆದು ಪರಿಣಾಮ ಅಗ್ನಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಈ ದುರ್ಘಟನೆಯಲ್ಲಿ ಹಲವು ಮಂದಿ ಜೀವಂತವಾಗಿ ದಹನಗೊಂಡಿದ್ದಾರೆ. ಈ ಬಸ್​ ಕುರಿತು ಪರಿಶೀಲನೆ ನಡೆಸಿದಾಗ ಈ ಬಸ್​ ವಿರುದ್ಧ ತೆಲಂಗಾಣದಲ್ಲಿ 16 ಚಲನ್​ಗಳನ್ನು ನೀಡಲಾಗಿದ್ದು, 23,120 ರೂ ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ.

22 ತಿಂಗಳಲ್ಲಿ 16 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್​: ಬಸ್​ 2024ರ ಜನವರಿ 27 ರಿಂದ 2025ರ ಅಕ್ಟೋಬರ್​ 9ರವರೆಗೆ 16 ಬಾರಿ ಟ್ರಾಫಿಕ್​ ನಿಯಮಗಳನ್ನು ಉಲ್ಲಂಘಿಸಿದ್ದು, ಸಾವಿರಾರು ದಂಡದ ಮೊತ್ತವನ್ನು ಉಳಿಸಿಕೊಂಡಿದೆ. 9 ಬಾರಿ ನೋ ಎಂಟ್ರಿ ವಲಯದಲ್ಲಿ ಪ್ರವೇಶ ಮಾಡಿದ್ದಕ್ಕೆ ದಂಡ ವಿಧಿಸಲಾಗಿದ್ದು, ವೇಗದ ಚಾಲನೆ ಮತ್ತು ಅಪಾಯಕಾರಿ ಚಾಲನೆ ಉಲ್ಲಂಘನೆಯನ್ನು ಈ ಬಸ್​ ಹೊಂದಿರುವುದು ತಿಳಿದು ಬಂದಿದೆ.

ಬಸ್​ ಸುಸ್ಥಿತಿಯಲ್ಲಿದೆ ಎಂದ ಸಾರಿಗೆ ಇಲಾಖೆ: ಅಗ್ನಿ ಅವಘಡಕ್ಕೆ ಒಳಗಾಗಿರುವ ಒಳಗೊಂಡಿರುವ ಬಸ್​ DD01 N9490 ನೋಂದಣಿ ಹೊಂದಿದೆ ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆ ತಿಳಿಸಿದೆ. ಬಸ್​ ಸುಸ್ಥಿತಿಯಲ್ಲಿತ್ತು. ಬೈಕಿಗೆ ಬಲವಾದ ಡಿಕ್ಕಿ ಹೊಡೆದ ಕಾರಣ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್​ ಕಾವೇರಿ ಟ್ರಾವೆಲ್ಸ್​ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಬಸ್​ ದಿಯು ಅಂಡ್​ ದಮನ್​ ನಲ್ಲಿ 2018ರ ಮೇ 2ರಂದು ನೋಂದಣಿಯಾಗಿದೆ. 2030ರ ಏಪ್ರಿಲ್​​ 30ರವರೆಗೆ ಪ್ರವಾಸಿ ಪರ್ಮಿಟ್​ ಕೂಡ ಹೊಂದಿದೆ. ಬೆಂಕಿಗಾಹುತಿಯಾಗಿರುವ ಬಸ್​ನ ಫಿಟ್​​ನೆಸ್​ ಸರ್ಟಿಫಿಕೇಟ್​ 2027ರ ಮಾರ್ಚ್​ 31ರವರೆಗೆ ಇದೆ. 2026ರ ಏಪ್ರಿಲ್​ 20ರವರೆಗೆ ಬಸ್​ ಇನ್ಸುರೆನ್ಸ್​ ಇದೆ. ಬಸ್​ಗೆ ಬೆಂಕಿ ಹೊತ್ತಿರುವ ಕುರಿತು ಎಲ್ಲಾ ಆಯಾಮದಲ್ಲಿ ತನಿಖೆ ಸಾಗಿದೆ. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ನಾವು ಕ್ರಮಗಳನ್ನು ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಇಂದು ಮುಂಜಾನೆ ಕರ್ನೂಲ್ ಉಪನಗರ ಚಿನ್ನೇಟಕೂರಿನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ಘಟನೆ ನಡೆದಿದೆ. ಬಸ್ ಬೈಕ್​ಗೆ ಬಲವಾಗಿ ಡಿಕ್ಕಿ ಹೊಡೆದ ನಂತರ ಬಸ್ ಹೊತ್ತಿ ಉರಿದಿದೆ. ಅಗ್ನಿಯ ಕೆನ್ನಾಲಿಗೆಗೆ ಬಸ್ ನಲ್ಲಿದ್ದ ಅನೇಕರು ಜೀವಂತವಾಗಿ ಸುಟ್ಟು ಕರಕಲಾಗಿದ್ದು, 12 ಮಂದಿ ಸಣ್ಣ ಪುಟ್ಟ ಗಾಯಗಳಿಂದ ಜೀವ ಉಳಿಸಿಕೊಂಡಿದ್ದಾರೆ.