Flash News

ಅಧಿಕಾರವೂ ಹೋಯ್ತು, ನಿಧಿಯೂ ಬತ್ತಿತು: ಬಿಆರ್​ಎಸ್​ ಪಕ್ಷಕ್ಕೆ ಕೇವಲ ₹15 ಕೋಟಿ ದೇಣಿಗೆ ಸಂಗ್ರಹ

ಹೈದರಾಬಾದ್: ಆಂಧ್ರ ಪ್ರದೇಶದಿಂದ ಪ್ರತ್ಯೇಕವಾಗಲು ಹೋರಾಡಿ ಸಫಲವಾಗಿ ಒಂದು ದಶಕ ತೆಲಂಗಾಣ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಸ್ಥಳೀಯ ಪಕ್ಷವಾದ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) 2023ರ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದೆ.

ಅಧಿಕಾರ ಕಳೆದುಕೊಂಡು ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಮೂಡಿರುವ ನಡುವೆ, ಪಕ್ಷಕ್ಕೆ ಬರುತ್ತಿದ್ದ ದೇಣಿಗೆಯೂ ತೀವ್ರ ಕುಸಿತ ಕಂಡಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಕೇವಲ 15 ಕೋಟಿ ರೂಪಾಯಿ ಮಾತ್ರ ವಿವಿಧ ಮೂಲಗಳಿಂದ ದೇಣಿಗೆ ಸಂಗ್ರಹಿಸಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಪ್ರಕಾರ, ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಪಕ್ಷವು ಕಳೆದ ಆರ್ಥಿಕ ವರ್ಷದಲ್ಲಿ 15.09 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಅದರಲ್ಲಿ 15 ಕೋಟಿ ರೂಪಾಯಿ ಚುನಾವಣಾ ಟ್ರಸ್ಟ್ ನಿಧಿಗಳ ಮೂಲಕ ಬಂದರೆ, ಉಳಿದ ಮೊತ್ತವು ವ್ಯಕ್ತಿಗತವಾಗಿ ಸಂಗ್ರಹವಾಗಿದೆ ಎಂದು ತಿಳಿಸಿದೆ.

ಒಂದೇ ವರ್ಷದಲ್ಲಿ ತೀವ್ರ ಕುಸಿತ: ಈ ಹಿಂದೆ ಅಂದರೆ 2023-24ನೇ ಸಾಲಿನಲ್ಲಿ ಪಕ್ಷವು 580 ಕೋಟಿ ರೂಪಾಯಿಗಿಂತ ಹೆಚ್ಚು ದೇಣಿಗೆ ಪಡೆದಿತ್ತು. ಚುನಾವಣಾ ಬಾಂಡ್‌ಗಳ ಮೂಲಕ 495 ಕೋಟಿ ರೂಪಾಯಿ ಬಂದರೆ, ಉಳಿದ 85 ಕೋಟಿ ರೂಪಾಯಿ ಚುನಾವಣಾ ಟ್ರಸ್ಟ್ ನಿಧಿಗಳ ಮೂಲಕ ಬಂದಿತ್ತು. ಅದಕ್ಕೂ ಹಿಂದಿನ ವರ್ಷವಾದ 2022-23ರಲ್ಲಿ ಬಿಆರ್​ಎಸ್​ ಪಕ್ಷ ಒಟ್ಟು 683 ಕೋಟಿ ರೂಪಾಯಿ ದೇಣಿಗೆಗಳನ್ನು ಸಂಗ್ರಹಿಸಿತ್ತು.

ಪಕ್ಷದಿಂದ ಪುತ್ರಿ ಕವಿತಾ ಉಚ್ಚಾಟನೆ: ರಾಜ್ಯದ ಪ್ರಮುಖ ವಿಪಕ್ಷವಾದ ಬಿಆರ್​​ಎಸ್​​ನಲ್ಲಿ ಇತ್ತೀಚೆಗೆ ಆಂತರಿಕ ಬೇಗುದಿ ಹೆಚ್ಚಾಗಿದೆ. ನಾಯಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ನಿದರ್ಶನವಾಗಿ ಪುತ್ರಿ ಹಾಗೂ ಎಂಎಲ್​ಸಿ ಆಗಿರುವ ಕೆ.ಕವಿತಾ ಅವರನ್ನೇ ಪಕ್ಷದ ನೇತಾರ ಕೆ.ಚಂದ್ರಶೇಖರ್ ರಾವ್ ಅವರು ಉಚ್ಚಾಟನೆ ಮಾಡಿ ಆದೇಶಿಸಿದ್ದಾರೆ.