Flash News

ತಾಯಿ ಜನ್ಮ ದಿನಾಂಕ ಸಂಖ್ಯೆಯ ಲಾಟರಿ ಖರೀದಿಸಿ 240 ಕೋಟಿ ರೂ. ಜಾಕ್ ಪಾಟ್‌ ಗೆದ್ದ ಭಾರತೀಯ ಮೂಲದ ವ್ಯಕ್ತಿ

ಅಬುದಾಬಿಯಲ್ಲಿ ವಾಸಿಸುವ 29 ವರ್ಷದ ಭಾರತೀಯ ಮೂಲದ ಅನಿಲ್‌ಕುಮಾರ್ ಬೊಲ್ಲಾ ಎಂಬ ವ್ಯಕ್ತಿ ಅಕ್ಟೋಬರ್ 18 ರಂದು ನಡೆದ 23 ನೇ ಲಕ್ಕಿ ಡೇ ಡ್ರಾದಲ್ಲಿ ಯುಎಇ ಲಾಟರಿಯ 100 ಮಿಲಿಯನ್ ದಿರಾಮ್ ( 240 ಕೋಟಿಗೂ ಹೆಚ್ಚು) ಜಾಕ್‌ಪಾಟ್ ಹೊಡೆದಿದ್ದಾರೆ. ಇದರಲ್ಲಿ ವಿಶೇಷವೆಂದರೆ ಆತ ಲಾಟರಿಗಾಗಿ ಆಯ್ಕೆ ಮಾಡಿಕೊಂಡ ನಂಬರ್. ಇದೇನು ಲಾಟರಿ ನಂಬರ್‌ ವಿಶೇಷ ಅಂದ್ರೆ ಅದು ಆತನ ತಾಯಿಯ ಹುಟ್ಟುಹಬ್ಬದ ಸಂಖ್ಯೆ ಎಂಬುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಯುಎಇ ಲಾಟರಿಯು ವಿಜೇತರ ಸಂದರ್ಶನದ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದೆ. ಈ ಸಂದರ್ಶನದಲ್ಲಿ ಅನಿಲ್‌ ಕುಮಾರ್‌ ಇದೇ ನಂಬರ್‌ ಅನ್ನು ಲಾಟರಿಗೆ ಆಯ್ಕೆ ಮಾಡಿದ್ದೇಕೆ? ಎಂದು ಕೇಳಿದ ಪ್ರಶ್ನೆಗೆ ಲಾಟರಿ ವಿಜೇತ ಅನಿಲ್‌ ಕುಮಾರ್‌ ಉತ್ತರಿಸಿ ನಾನು ಲಾಟರಿ ‌ಡ್ರಾ ಕರೆ ಬಂದಾಗ ನಾನು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ, ನನಗೆ ಕರೆ ಬಂದಾಗ ನನಗೆ ಇದು ಅವಾಸ್ತವಿಕ ಎಂದೆನಿಸಿತು, ನಂತರ ಅದು ನಿಜ ಎಂದು ತಿಳಿದಾಗ ನನಗೆ ಆಘಾತ ಹಾಗೂ ಸಂತೋಷವಾಗಿತ್ತು, ಈ ಗೆಲುವು ನನ್ನ ಕನಸಿಗೆ ಮೀರಿದ್ದು ಎಂದಿದ್ದಾರೆ.

ಇನ್ನು, ಲಾಟರಿಯಲ್ಲಿ ಆಯ್ಕೆ ಮಾಡಿದ ಹಿನ್ನಲೆಯ ಕುರಿತು ವಿವರಿಸಿದ ಅನಿಲ್‌ಕುಮಾರ್‌ “ನಾನು ಯಾವುದೇ ಮ್ಯಾಜಿಕ್ ಅಥವಾ ಬೇರೆ ಅಂತಹದ್ದೇನನ್ನೂ ಮಾಡಿಲ್ಲ, ನಾನು ಸುಲಭವಾದ ಆಯ್ಕೆ( Easy Pick) ಅನ್ನು ಆರಿಸಿಕೊಂಡೆ. ಎಂದಿರುವ ಅವರು, ಕೊನೆಯ ಸಂಖ್ಯೆ ನನಗೆ ತುಂಬಾ ವಿಶೇಷವಾಗಿದೆ. ಇದು ನನ್ನ ಅಮ್ಮನ ಹುಟ್ಟುಹಬ್ಬ ಎಂದು ತಿಳಿಸಿದ್ದಾರೆ.

ಇನ್ನು ಈ ಲಾಟರಿ ಹಣವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅನಿಲ್‌ ಕುಮಾರ್‌ ನಾನು ಈ ಹಣವನ್ನು ಜವಾಬ್ದಾರಿಯುತವಾಗಿ ಹೇಗೆ ಹೂಡಿಕೆ ಮಾಡಬೇಕು ಎಂದು ಯೋಚಿಸುತ್ತೇನೆ. ನಾನು ಈ ಹಣದಿಂದ ಸೂಪರ್‌ಕಾರ್ ಖರೀದಿಸಿ ಐಷಾರಾಮಿ ರೆಸಾರ್ಟ್ ಅಥವಾ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಆಚರಿಸಲು ಇಷ್ಟಪಡುತ್ತೇನೆ, ಹಾಗೂ ನನ್ನ ತಂದೆ ತಾಯಿಯನ್ನು ಯುಎಇಗೆ ಕರೆದುಕೊಂಡು ಬರಲು ಇಚ್ಚಿಸುತ್ತೇನೆ. ಅವರಿಗೆ ಸಣ್ಣ ಪುಟ್ಟ ಆಸೆಗಳಿವೆ ನಾನು ಅವನ್ನು ಪೂರೈಸಿ ಅವರೊಂದಿಗೆ ಜೀವನವನ್ನು ಆನಂದದಿಂದ ಜೀವಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.ಇದೇ ವೇಳೆ ತಮಗೆ ಲಾಟರಿ ನೀಡಿದ ಸಂಸ್ಥಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ