Flash News

SIR ನೋಟಿಸ್ ಪಡೆದ ಅನಿವಾಸಿ ಭಾರತೀಯರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಸಚಿವ ಯು.ಟಿ.ಖಾದರ್ ಗೆ ಕರ್ನಾಟಕ ಎನ್ಆರ್ ಐ ಫೋರಂ ಮನವಿ

ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್.ಐ. ಆರ್)ಗೆ ಸಂಬಂಧಿಸಿ ನೋಟಿಸ್ ಪಡೆದ ಕರ್ನಾಟಕದ ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಮಧ್ಯಪ್ರವೇಶಿಸುವಂತೆ ಕೋರಿ ಕರ್ನಾಟಕ ಎನ್ಆರ್ ಐ ಫೋರಂ ಸೌದಿ ಅರೇಬಿಯಾವು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಅವರನ್ನು ಒತ್ತಾಯಿಸಿದೆ.

NRI ಫೋರಂ ಅಧ್ಯಕ್ಷರಾದ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ ಮತ್ತು ಕಾರ್ಯಕಾರಿ ಸಮಿತಿಯ ನಿರ್ದೇಶನ ಮತ್ತು ಮಾರ್ಗದರ್ಶನದಡಿ ಸಚಿವ ಯು.ಟಿ.ಖಾದರ್ ರನ್ನು ಆ.5ರಂದು ಭೇಟಿಯಾದ ಎನ್ಆರ್ ಐ ಫೋರಂ ಸೌದಿ ಅರೇಬಿಯಾದ ನಿಯೋಗವು ಈ ಬಗ್ಗೆ ಮನವಿ ಸಲ್ಲಿಸಿದೆ.

SIR ಪ್ರಕ್ರಿಯೆಗೆ ಸಂಬಂಧಿಸಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದ ಕೆಲವು ಅನಿವಾಸಿ ಭಾರತೀಯರು ದೃಢೀಕರಣಕ್ಕಾಗಿ ಆಯೋಗದ ಎದುರು ಖುದ್ದು ಹಾಜರಾಗಬೇಕೆಂದು ಸೂಚಿಸಲಾಗಿದೆ. ಇದರಿಂದ ಸೌದಿ ಅರೇಬಿಯಾ ಮತ್ತು ಇತರ ದೇಶಗಳಲ್ಲಿ ವಾಸಿಸುತ್ತಿರುವ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೇವಲ ಈ ಒಂದು ಉದ್ದೇಶಕ್ಕಾಗಿ ವಿದೇಶದಿಂದ ಕರ್ನಾಟಕಕ್ಕೆ ಪ್ರಯಾಣಿಸುವುದು ದುಬಾರಿಯಾಗಲಿದೆ. ಈ ಖರ್ಚು ಭರಿಸಿವುದು ತ್ರಾಸದಾಕವಾಗಲಿದೆ. ಅಲ್ಲದೇ ಕಿರು ಸೂಚನೆಯ ಮೇರೆಗೆ ಉದ್ಯೋಗಿಗಳು ರಜೆ ಪಡೆಯುವುದು ಕಷ್ಟಕರವಾಗಲಿದೆ. ಆದ್ದರಿಂದ ಕರ್ನಾಟಕ ಸರಕಾರವು ಈ ವಿಷಯವನ್ನು ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ ಮತ್ತು ಭಾರತೀಯ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ನೇರವಾಗಿ ಚುನಾವಣಾ ಆಯೋಗದ ಎದುರು ಹಾಜರಾಗಲು ಅಸಾಧ್ಯವಾಗುವ ಅನಿವಾಸಿ
ಕನ್ನಡಿಗರಿಗೆ ಕೇರಳಂ ರಾಜ್ಯದಲ್ಲಿ ಮಾಡಿರುವಂತೆ ಚುನಾವಣಾ ಆಯೋಗವು ವರ್ಚುವಲ್ / ವೀಡಿಯೊ ಕಾನ್ಸರೆನ್ಸ್ ಮೂಲಕ ಹಾಜರಾಗಿ ದೃಢೀಕರಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ಸಚಿವ ಯು.ಟಿ.ಖಾದರ್, ಈ ಬಗ್ಗೆ ಕರ್ನಾಟಕ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಅನಿವಾಸಿ ಕನ್ನಡಿಗರು ಪಾಸ್ಪೋರ್ಟ್ ಪ್ರತಿಯನ್ನು ಸಲ್ಲಿಸುವ ಮೂಲಕ ಅಥವಾ ಅಗತ್ಯವಿದ್ದಲ್ಲಿ ವರ್ಚುವಲ್ ಹಾಜರಾತಿ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಮಾಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸುವುದಾಗಿ ಹೇಳಿದರು. ಸಚಿವರನ್ನು ಭೇಟಿಯಾದ ನಿಯೋಗದಲ್ಲಿ NRI ಫೋರಂ ಸೌದಿ ಅರೇಬಿಯಾದ ಸಲಹೆಗಾರ ಫಾರೂಕ್ ಮುಲ್ಕಿ, ಖಜಾoಚಿ ಅಯಾಝ್ ಕೈಕಂಬ, ಮುಖ್ಯ ಸಂಯೋಜಕರಾದ ರಫೀಕ್ ಕೆ. ಎಚ್., ಅಬ್ದುಲ್ ಹಮೀದ್ ಆರಮ್ಯಾಕ್ಸ್ ಮತ್ತು ಮುಸ್ತಾಕ್ ಎಂ.ಎಚ್. ಉಪಸ್ಥಿತರಿದ್ದರು.