ಮಂಗಳೂರು: ಎಲ್ಲಿಯೋ ಕುಳಿತು ರಾಜಕೀಯ ಹೇಳಿಕೆ ಕೊಟ್ರೆ ಅದಕ್ಕೆ ಉತ್ತರ ಕೊಡಲ್ಲ, ನಾಳೆ ನಾನು ಕಚೇರಿಯಲ್ಲಿ ಇರುತ್ತೇನೆ, ಲಿಖಿತವಾಗಿ ದೂರು ಕೊಡಲಿ, ಅಗತ್ಯ ಬಿದ್ದರೆ ತನಿಖೆ ಮಾಡಿಸುತ್ತೇನೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಅಮೆರಿಕದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಖಾದರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪದ ವಿಚಾರವನ್ನು ಗಮನಿಸಿದ್ದೇನೆ. ಎಲ್ಲದಕ್ಕೂ ಮದ್ದಿದೆ. ಕೆಲವರ ಅಸೂಯೆಗೆ ಮದ್ದು ಇಲ್ಲ. ಹೊಸತಾಗಿ ಮನೆ ಕಟ್ಟುವಾಗ ದೃಷ್ಟಿ ಬೀಳಬಾರದೆಂದು ದೃಷ್ಟಿ ಬೊಂಬೆ ಕಟ್ಟುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ವಿಧಾನಸಭೆಗೆ ಗೌರವ ಸಿಗುವ ಸಂದರ್ಭ ಬಂದಿದೆ. ಇವರ ಆರೋಪ ನಮ್ಮ ವಿಧಾನಸಭೆಗೆ ದೃಷ್ಟಿ ಬೊಂಬೆ ಇದ್ದಂತೆ ಎಂದು ಹೇಳಿದ್ದಾರೆ.
ಶಾಸಕರಿಗೆ ಸವಲತ್ತು ಸೌಲಭ್ಯ ಒದಗಿಸುವುದು ನನ್ನ ಜವಾಬ್ದಾರಿ. ಆ ಕೆಲಸವನ್ನು ಮಾಡಿಸಿದ್ದೇನೆ. ಯಾರೋ ಮಾತನಾಡುತ್ತಾರೆಂದು ಅದಕ್ಕೆಲ್ಲ ಉತ್ತರ ಕೊಡುತ್ತ ಕೂರುವುದಕ್ಕೆ ಆಗುವುದಿಲ್ಲ. ಯಾರಿಗಾದ್ರೂ ಸಂಶಯ ಇದ್ದರೆ ಕಚೇರಿಗೆ ಬರಲಿ, ಸಂಶಯ ನಿವಾರಿಸುತ್ತೇನೆ. ನಾನು ಸಂವಿಧಾನ ಪೀಠದಲ್ಲಿ ಇದ್ದೇನೆ. ಹಾಗಾಗಿ ಯಾರದ್ದೋ ಮಾತಿಗೆಲ್ಲ ಉತ್ತರಿಸಲು ಆಗಲ್ಲ ಎಂದು ತಿಳಿಸಿದರು.
ಇವರಿಗೆ ಬೇಕಾಗಿಯೇ ನಾಳೆ ನನ್ನ ಕಚೇರಿಗೆ ಹೋಗುತ್ತೇನೆ. ಅವರು ಹೇಳಿರುವ ವಿಚಾರಗಳನ್ನು ಲಿಖಿತವಾಗಿ ಕೊಟ್ಟರೆ ಅದನ್ನು ಪರಿಶೀಲಿಸುತ್ತೇನೆ. ಏನೇ ಆರೋಪ ಇದ್ದರೂ ಬರೆದು ಕೊಡಲಿ. ಯಾರೋ ಪ್ರಶ್ನೆ ಮಾಡುತ್ತಾರೆಂದು ಉತ್ತರ ಕೊಡಲು ನಾನು ಅವರ ಜನ ಅಲ್ಲ. ಹಿಂದೆ ಮುಂದೆ ಗೊತ್ತಿಲ್ಲದೆ ಮಾತನಾಡಿದ್ದಕ್ಕೆಲ್ಲ ನಾನು ರಾಜಕೀಯ ವ್ಯಕ್ತಿಯಾಗಿದ್ದರೆ ಅದೇ ರೀತಿ ಉತ್ತರ ಕೊಡಬಹುದಿತ್ತು. ಈಗ ನಾನು ರಾಜಕೀಯ ವ್ಯಕ್ತಿಯಲ್ಲ.
ಸಾಂವಿಧಾನಿಕ ಹುದ್ದೆಯಲ್ಲಿದ್ದು ಏನು ಬೇಕಾದರೂ ಮಾತನಾಡಲು ಆಗುತ್ತದಾ.. ನಮ್ಮ ಶಾಸಕರಿಗೆ ಯಾವುದೆಲ್ಲ ಸೌಕರ್ಯ, ಸವಲತ್ತು ಕೊಡಬೇಕೋ ಅದನ್ನು ಕೊಡುವುದು ನನ್ನ ಕರ್ತವ್ಯ. ಇವರಿಗೆ ನನ್ನ ಬಗ್ಗೆ ಡ್ಯಾಮೇಜ್ ಮಾಡುವುದೇ ಉದ್ದೇಶ ಆಗಿದ್ದರೆ ಇಂಥ ಹೇಳಿಕೆಯನ್ನು ದಿನವೂ ಕೊಡುತ್ತ ಇರಲಿ. ನನಗೆ ಸಂತೋಷ ಇದೆ ಎಂದು ಹೇಳುತ್ತ ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ನಿರಾಕರಿಸಿದರು.



