ಕಲಬುರಗಿ: ಇದೇ ನವೆಂಬರ್ 2ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಸಂಬಂಧ ಕೋರ್ಟ್, ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚನಲಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು (ಅಕ್ಟೋಬರ್ 30) ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಮತ್ತೊಂದು ಶಾಂತಿ ಸಭೆ ಮಾಡಲು ಸೂಚಿಸಿದೆ.
ನವೆಂಬರ್ 5ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿಯೇ ಶಾಂತಿ ಸಭೆ ನಡೆಸಲು ಕೋರ್ಟ್ ಸೂಚಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಹೀಗಾಗಿ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್ಎಸ್ಎಸ್ಗೆ ಹಿನ್ನಡೆಯಾದಂತಾಗಿದೆ.
ಈ ಕುರಿತ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರು ಗುರುವಾರ ಮುಂದುವರಿಸಿದರು.
‘ಶಾಂತಿ ಸಭೆಯಲ್ಲಿ ಅರ್ಜಿದಾರರು ಪಾಲ್ಗೊಂಡಿರಲಿಲ್ಲ’ ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿದರು.
‘ಶಾಂತಿಸಭೆಯಲ್ಲಿ ಅರ್ಜಿದಾರರು ಯಾಕೆ ಪಾಲ್ಗೊಂಡಿರಲಿಲ್ಲ’ ಎಂದು ನ್ಯಾಯಮೂರ್ತಿ ಕಮಲ್ ಪ್ರಶ್ನಿಸಿದರು.
ಇದಕ್ಕೆ ಅರ್ಜಿದಾರ ಪರ ವಕೀಲ ಅರುಣ ಶಾಮ್, ‘ಅರ್ಜಿದಾರರ ಸಂಬಂಧಿಕರು ಅಸುನೀಗಿದ್ದರು. ಹೀಗಾಗಿ ಪಾಲ್ಗೊಂಡಿರಲಿಲ್ಲ’ ಎಂದರು.
‘ಶಾಂತಿ ಸಭೆಯ ಗಂಭೀರತೆಯನ್ನು ಅರ್ಜಿದಾರರು ಯಾಕೆ ಅರಿಯಲಿಲ್ಲ? ಅರ್ಜಿದಾರರ ಪರ ವಕೀಲರು ಸಭೆಯಲ್ಲಿ ಯಾಕೆ ಹಾಜರಾಗಿರಲಿಲ್ಲ’ ಎಂದು ಹೈಕೋರ್ಟ್ ಕೇಳಿತು.
ಆಗ ಅರ್ಜಿದಾರರ ಪರ ವಕೀಲ ಅರುಣ ಶಾಮ್, ‘ಇನ್ನೊಮ್ಮೆ ಸಭೆ ನಡೆಸಿದರೆ, ಅರ್ಜಿದಾರರು ಪಾಲ್ಗೊಳ್ಳುತ್ತಾರೆ’ ಎಂದರು.
ಅದಕ್ಕೆ ಅದಕ್ಕೆ ನ್ಯಾಯಾಲಯ ಇನ್ನೊಂದು ಸುತ್ತಿನ ಸಭೆಗೆ ದಿನಾಂಕ ನಿಗದಿಪಡಿಸಲು ಸಾಧ್ಯವೇ ಎಂದು ನ್ಯಾಯಾಲಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಕೇಳಿತು.
ಅದಕ್ಕೆ ಇನ್ನೊಂದು ಸುತ್ತಿನ ಸಭೆ ನಡೆಸಲು ತಮಗೆ ಏನು ಅಭ್ಯಂತರ ಇಲ್ಲ ಎಂದು ಶಶಿಕಿರಣ ಶೆಟ್ಟಿ ಹೇಳಿದರು.
ಆಗ ನ್ಯಾಯಾಲಯ ನವೆಂಬರ್ 5 ರಂದು ಸಂಜೆ 5 ಗಂಟೆಗೆ ಇನ್ನೊಂದು ಶಾಂತಿ ಸಭೆ ನಡೆಸಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿತು. ಜೊತೆಗೆ ಅರ್ಜಿದಾರ ಪರ ಹಿರಿಯ ವಕೀಲರು ಸರ್ಕಾರದ ಪರ ವಕೀಲರು ಹಾಗೂ ಜಿಲ್ಲಾಧಿಕಾರಿ ಸಭೆಯಲ್ಲಿ ಪಾಲ್ಗೊಳ್ಳಲಿ ಎಂದು ನಿರ್ದೇಶನ ನೀಡಿತು.



