Flash News

ಮಕ್ಕಳ ನಿಶ್ಚಿತಾರ್ಥಕ್ಕೂ ಮುನ್ನವೇ ವರನ ತಂದೆಯ ಜತೆ ವಧುವಿನ ತಾಯಿ ಎಸ್ಕೇಪ್​: 8 ದಿನಗಳ ರಹಸ್ಯ ಬಯಲು!

ಭೋಪಾಲ್​: ಮಕ್ಕಳ ನಿಶ್ಚಿತಾರ್ಥಕ್ಕೂ ಮುನ್ನವೇ ವರನ ತಾಯಿ ಮತ್ತು ವಧುವಿನ ತಂದೆ ಓಡಿ ಹೋದ ವಿಚಿತ್ರ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಉಂತ್ವಾಸ ಗ್ರಾಮದಲ್ಲಿ ನಡೆದಿದೆ.

ಕಳೆದ ಎಂಟು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ನಾಪತ್ತೆಯಾಗಿದ್ದ ಮಹಿಳೆ ಗುರುವಾರ (ಅ. 30) ಪತ್ತೆಯಾದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿದ್ದ 45 ವರ್ಷದ ಮಹಿಳೆ ಉಂತ್ವಾಸ ಗ್ರಾಮದ ನಿವಾಸಿ. ಸುಮಾರು ಒಂದು ವಾರಗಳಿಂದ ನಾಪತ್ತೆಯಾಗಿದ್ದರು. ತಾಯಿ ಕಾಣದಿದ್ದಾಗ ಆಕೆಯ ಪುತ್ರ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಬಳಿಕ ಪೊಲೀಸರು ತನಿಖೆ ಆರಂಭಿಸಿದರು.

ತನಿಖೆಯ ನಡುವೆಯೇ ಗುರುವಾರ ಚಿಕ್ಲಿ ಗ್ರಾಮದಲ್ಲಿ ಮಹಿಳೆ ಇರುವುದು ಪೊಲೀಸರಿಗೆ ಗೊತ್ತಾಯಿತು. ಈ ವೇಳೆ ಸ್ಥಳಕ್ಕೆ ಹೋದಾಗ ಆಕೆ 50 ವರ್ಷದ ವ್ಯಕ್ತಿಯೊಬ್ಬನ ಜತೆ ವಾಸವಿದ್ದಳು. ಈ ವೇಳೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆಕೆಯ ಜತೆಯಿದ್ದ ವ್ಯಕ್ತಿ ಆಕೆಯ ಭಾವಿ ಬೀಗರೆಂದು ತಿಳಿದು ಪೊಲೀಸರಿಗೂ ಒಂದು ಕ್ಷಣ ಅಚ್ಚರಿಯಾಗಿದೆ.

ಅಂದಹಾಗೆ, ಚಿಕ್ಲಿ ಗ್ರಾಮದ ರೈತ ಸ್ವಲ್ಪ ಸಮಯದ ಹಿಂದೆಯೇ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದಾನೆ. ಆತ ತನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಆತನ ಮಗಳಿಗೂ ‘ಕಾಣೆಯಾದ’ ಮಹಿಳೆಯ ಮಗನೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ನಿಶ್ಚಿತಾರ್ಥದ ಸಿದ್ಧತೆಗಳ ಸಮಯದಲ್ಲೇ ಭಾವಿ ಬೀಗರ ನಡುವೆ ಪ್ರೇಮಾಂಕುರವಾಗಿ, ಒಟ್ಟಿಗೆ ಎಸ್ಕೇಪ್​ ಆಗಲು ನಿರ್ಧರಿಸಿದರು.

ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇಬ್ಬರು ಎಸ್ಕೇಪ್ ಆದರು. ಬಳಿಕ ಮಹಿಳೆಯ ಪುತ್ರ ನಾಪತ್ತೆ ದೂರು ದಾಖಲಿಸಿದನು. ತನಿಖೆಯ ನಡುವೆ ಮಹಿಳೆ ಪತ್ತೆಯಾಗಿದ್ದು, ಭಾವಿ ಬೀಗರ ಲವ್​ ಸ್ಟೋರಿ ಕೇಳಿ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿದ್ದಾರೆ.

ಈ ಘಟನೆ ಬಗ್ಗೆ ಪೊಲೀಸ್​ ಅಧಿಕಾರಿ ಅಶೋಕ್ ಪತಿದಾರ್ ಮಾತನಾಡಿದ್ದು, ಎಂಟು ದಿನಗಳ ಹಿಂದೆಯೇ 45 ವರ್ಷದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ತನ್ನ ಪತಿ ಮತ್ತು 18 ಮತ್ತು 20 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಬಿಟ್ಟು 50 ವರ್ಷದ ವ್ಯಕ್ತಿಯೊಂದಿಗೆ ಎಸ್ಕೇಪ್​ ಆಗಿದ್ದಾರೆ ಎಂಬ ವಿಚಾರ ನಮ್ಮ ತನಿಖೆಯಲ್ಲಿ ತಿಳಿದುಬಂತು. ಅವರಿಬ್ಬರು ಭಾವಿ ಬೀಗರಾಗಬೇಕಿತ್ತು. ಆಕೆಯ ಮಗನಿಗೂ, ಆತನ ಮಗಳಿಗೂ ನಿಶ್ಚಿತಾರ್ಥ ಮಾಡಬೇಕಿತ್ತು. ಅಷ್ಟರಲ್ಲೇ ಓಡಿ ಹೋಗಿದ್ದಾರೆ. ಇದರಿಂದಾಗಿ ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂದು ಪತಿದಾರ್​ ಹೇಳಿದ್ದಾರೆ.

ಇನ್ನು ಪತ್ತೆಯಾದ ನಂತರವೂ, ಮಹಿಳೆ ತನ್ನ ಪ್ರಿಯಕರನನ್ನು ಬಿಡಲು ನಿರಾಕರಿಸಿದ್ದಾಳೆ. ಅವನೊಂದಿಗೆ ಉಳಿದ ಜೀವನ ಕಳೆಯುವುದಾಗಿ ಹೇಳಿದ್ದಾಳೆ. ಮನೆಗೆ ವಾಪಸ್​ ಬರುವಂತೆ ಆಕೆಯ ಕುಟುಂಬ ಸದಸ್ಯರು ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಆಕೆ ತನ್ನ ನಿರ್ಧಾರಕ್ಕೆ ದೃಢವಾಗಿ ಅಂಟಿಕೊಂಡಿದ್ದಾರೆ. ದರಿಂದಾಗಿ ಎರಡೂ ಮನೆಯವರು ತುಂಬಾ ಮುಜುಗರಕ್ಕೆ ಒಳಗಾದರು