ಹುಬ್ಬಳ್ಳಿ: ಸಿದ್ದರಾಮಯ್ಯ ಇರುವವರೆಗೆ ಯಾರೂ ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ವಸತಿ ಸಚಿವ ಜಮೀರ್ ಅಹಮ್ಮದ್ ಸಿದ್ದರಾಮಯ್ಯನವರ ಪರ ಬ್ಯಾಟ್ ಬೀಸಿದ್ದಾರೆ. 2028 ರವರೆಗೂ ಸಿದ್ಧರಾಮಯ್ಯ ಅವರೇ ಸಿಎಂ ಆಗಿ ಮುಂದುವರೀತಾರೆ. ಟಗರಿಗೆ ಠಕ್ಕರ್ ಕೋಡೋರು ಯಾರು ಇಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಅಭಿಮಾನಿ ಬಳಗಕ್ಕೆ ಜಮೀರ್ ಸ್ಪಷ್ಟ ಸಂದೇಶ ರವಾನಿಸಿದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ.
ಸಿದ್ದರಾಮಯ್ಯ ಟಗರು, ಅದಕ್ಕೆ ಟಕ್ಕರ ಕೊಡಲು ಯಾರಿಗೂ ಆಗಲ್ಲಾ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ, ಅಧಿಕಾರ ಬದಲಾವಣೆ ಈ ರೀತಿಯ ಗೊಂದಲ ಇಲ್ಲ ಎಂದು ಜಮೀರ್ ಅಹಮ್ಮದ್ ಸ್ಪಷ್ಟಪಡಿಸಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ, ಪಕ್ಷದ ನಿರ್ಧಾರವೇ ಅಂತಿಮ ಎಂದಿದ್ದಾರೆ.
ಡಿಕೆ ಶಿವಕುಮಾರ್ ಅಬಿಮಾನಿಗಳು, ಖುದ್ದು ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಇದರಲ್ಲಿ ತಪ್ಪೇನು ಇಲ್ಲ. ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ನಾಯಕತ್ವದಲ್ಲಿ ಈ ಭಾರಿ ಅಭೂತಪೂರ್ವ ಗೆಲುವಿನೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ನಮಗೂ ಇದೆ. ಸದ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. 2028ರಲ್ಲಿ ಅಂದರೆ ಸಿದ್ದರಾಮ್ಯಯ ನಂತರ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.
ಪಕ್ಷ ಕೇಳಿದ್ರೆ ಮಂತ್ರಿ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಲು ಸಿದ್ದ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ. ನಾನು ಪಕ್ಷದ ಜವಾಬ್ದಾರಿ ನಿಭಾಯಿಸ್ತೇನೆ. ಸಚಿವ ಸಂಪುಟ ಪುನರ್ ರಚನೆಯಲ್ಲಿ ಮಂತ್ರಿ ಸ್ಥಾನ ಬಿಡಬೇಕು ಎಂದರೆ ಸಿದ್ಧನಿದ್ದೇನೆ. ಹೈಕಮಾಂಡ್ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಜಮೀರ್ ಹೇಳಿದ್ದಾರೆ.ಪ್ರಸಾದ್ ಅಬ್ಬಯ್ಯ ನಮ್ಮ ಸ್ನೇಹಿತ ಅವರು ಸತತವಾಗಿ ಮೂರು ಬಾರಿ ಗೆದ್ದಿದ್ದಾರೆ. ದಲಿತರಿಗೆ ಬಲ ನೀಡುವ ನಿಟ್ಟಿನಲ್ಲಿ ಈ ಬಾರಿ ಅವರಿಗೆ ಮಂತ್ರಿ ಸ್ಥಾನ ಸಿಗಬೇಕು. ನಾನು ಕೂಡ ಒತ್ತಾಯ ಹಾಕುತ್ತೇನೆ ಎಂದು ಜಮೀರ್ ಹೇಳಿದ್ದಾರೆ. ಅವರು ಒಪ್ಪಿದ್ರೆ ನನ್ನ ಸ್ಥಾನ ಬಿಟ್ಟು ಕೊಡುವೆ ಎಂದಿದ್ದಾರೆ.



