ಭಾರತದ ಪ್ರಸಿದ್ಧ ಬೀಡಿ ಬ್ರಾಂಡ್ ದಿನೇಶ್ ಬೀಡಿಯ ಸ್ಥಾಪಕ, ಬೀಡಿ ಉದ್ಯಮಿಯನ್ನು ಅವರ ಮಗನೇ ಗುಂಡಿಕ್ಕಿ ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದ ವೃಂದಾವನ ನಗರದಲ್ಲಿ ನಡೆದಿದೆ. ಮಗ ಮದ್ಯ ಸೇವಿಸುತ್ತಿದ್ದಿದ್ದಕ್ಕೆ ತಂದೆ ಆಕ್ಷೇಪಿಸಿದ್ದೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. 68 ವರ್ಷದ ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ ಹೀಗೆ ಮಗನ ಕೈಯಲ್ಲೇ ಕೊಲೆಯಾದ ಉದ್ಯಮಿ. ಅವರ 45 ವರ್ಷದ ಪ್ರಾಯದ ಮಗ ನರೇಶ್ ಕುಡಿದ ಮತ್ತಿನಲ್ಲೇ ತಂದೆಗೆ ಗುಂಡಿಟ್ಟಿದ್ದು, ಬಳಿಕ ತಾನು ಸಾವಿಗೆ ಶರಣಾಗಿದ್ದಾನೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಸುರೇಶ್ ಚಂದ್ ಅಗರ್ವಾಲ್ ಅವರು ತಮ್ಮ ಇಬ್ಬರು ಕಿರಿಯ ಪುತ್ರರಾದ ನರೇಶ್ ಹಾಗೂ ಮಹೇಶ್ ಅಗರ್ವಾಲ್ ಜೊತೆ ಮಥುರಾದಲ್ಲಿ ವಾಸಿಸುತ್ತಿದ್ದರು.
ಮಥುರಾದ ವೃಂದಾವನ ನಗರದಲ್ಲಿರುವ ಉದ್ಯಮಿಯ ಮನೆಯಲ್ಲಿಯೇ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತಾಳ್ಮೆ ಕಳೆದುಕೊಂಡ ಮಗ ತನ್ನ ತಂದೆಗೆ ಗುಂಡಿಕ್ಕಿದ್ದು, ಬಳಿಕ ತಂದೆಯ ಸಾವಿನ ಅರಿವಾಗುತ್ತಿದ್ದಂತೆ ತಾನು ಅದೇ ಗನ್‌ನಲ್ಲಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಗುಂಡಿನ ಸದ್ದು ಕೇಳಿ ನೆರೆಹೊರೆಯ ಮನೆಯವರು ಅಲ್ಲಿಗೆ ಓಡಿ ಬಂದಿದ್ದು, ಈ ವೇಳೆ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸುರೇಶ್ ಚಂದ್ ಹಾಗೂ ಅವರ ಮಗನನ್ನು ಹತ್ತಿರದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಉದ್ಯಮಿ ಮತ್ತು ಅವರ ಮಗ ಇಬ್ಬರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಕೆಲವು ವರದಿಗಳ ಪ್ರಕಾರ ಸುರೇಶ್ ತನ್ನ ಮಗ ನರೇಶ್ ಕುಡಿತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನರೇಶ್ ಅವರನ್ನು ಕೆರಳಿಸಿತು ಮತ್ತು ಇಬ್ಬರ ಮಧ್ಯೆ ಗಲಾಟೆಗೆ ಕಾರಣವಾಯ್ತು ಎಂದು ತಿಳಿದು ಬಂದಿದೆ.
ಬೀಡಿ ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ ಅವರ ಭೀಕರ ಹತ್ಯೆಗೆ ವ್ಯವಹಾರ ವಿವಾದಗಳೇ ಕಾರಣ ಎಂದು ಆರಂಭದಲ್ಲಿ ಹೇಳಲಾಗಿತ್ತು, ಅವರನ್ನು ಅವರ ಮಗ ನರೇಶ್ ಕುಮಾರ್ ಅಗರ್ವಾಲ್ ಅವರೇ ಗುಂಡಿಕ್ಕಿ ಕೊಂದಿದ್ದರು. ಈ ಬಗ್ಗೆ ಕುಟುಂಬ ಸದಸ್ಯರು ಯಾರೂ ದೂರು ನೀಡಿಲ್ಲ ಮತ್ತು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ ಎಂದು ಮಥುರಾದ ವೃತ್ತ ಅಧಿಕಾರಿ ಸಂದೀಪ್ ಕುಮಾರ್ ಸಿಂಗ್ ಹೇಳಿದ್ದಾರೆ.



