ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ತಮ್ಮ ಚುನಾವಣಾ ವಿಜಯವನ್ನು ದೀರ್ಘಕಾಲದ ರಾಜಕೀಯ ರಾಜವಂಶವನ್ನು ಕೊನೆಗೊಳಿಸುವ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಉಲ್ಲೇಖಿಸಿ, ಮಮ್ದಾನಿ ತಮ್ಮ ಗೆಲುವು ನಗರದ “ಹಳೆಯದರಿಂದ ಹೊಸದಕ್ಕೆ” ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ನ್ಯೂಯಾರ್ಕ್ ಸಿಟಿ ಮೇಯರ್ ಸ್ಪರ್ಧೆಯಲ್ಲಿ ರಾಜಕೀಯ ಪ್ರಬಲ ನಾಯಕ ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸುವ ಮೂಲಕ ಮಮ್ದಾನಿ ಇತಿಹಾಸ ನಿರ್ಮಿಸಿದರು.
ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಝೊಹ್ರಾನ್ ಮಮ್ದಾನಿ, 1947ರಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಜವಾಹರ್ ಲಾಲ್ ನೆಹರೂ ಮಾಡಿದ್ದ ‘ಟ್ರಸ್ಟಿ ವಿತ್ ಡೆಸ್ಟಿನೀ’ ಭಾಷಣವನ್ನು ಉಲ್ಲೇಖಿಸಿದರು.
“ನಾನು ನಿಮ್ಮ ಮುಂದೆ ನಿಂತು ಜವಾಹರ್ ಲಾಲ್ ನೆಹರೂ ಅವರ ಮಾತುಗಳನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಇತಿಹಾಸದಲ್ಲಿ ಹಳೆಯದರಿಂದ ಹೊಸತಕ್ಕೆ ಹೆಜ್ಜೆ ಇಡುವ, ಕಾಲ ಮುಗಿದಾಗ ಸುದೀರ್ಘ ಕಾಲ ತುಳಿತಕ್ಕೊಳಗಾದ ದೇಶದ ಆತ್ಮವು ಭರವಸೆಯೊಂದನ್ನು ಕಂಡುಕೊಳ್ಳುವ ಕ್ಷಣ ಅಪರೂಪಕ್ಕೊಮ್ಮೆ ಬರುತ್ತದೆ. ಇಂದು ನಾವು ಹಳೆಯದರಿಂದ ಹೊಸದಕ್ಕೆ ಕಾಲಿಡುತ್ತಿದ್ದೇವೆ” ಎಂದು ಜವಾಹರ್ ಲಾಲ್ ನೆಹರೂ ಅವರ ಮಾತುಗಳನ್ನು ಪುನರುಚ್ಚರಿಸಿದರು.
“ಈ ವಿಜಯವು ನ್ಯೂಯಾರ್ಕ್ ನ ಹೊಸ ಯುಗವನ್ನು ಸಂಕೇತಿಸುತ್ತದೆ. ನಾವು ಯಾವ ಪ್ರಯತ್ನಕ್ಕೆ ಹಿಂಜರಿಯುತ್ತಾ, ಕಾರಣಗಳ ಪಟ್ಟಿ ನೀಡುತ್ತಿದ್ದೆವೊ, ಅದರ ಬದಲಿಗೆ ನ್ಯೂಯಾರ್ಕ್ ನಿವಾಸಿಗಳು ತಮ್ಮ ನಾಯಕರಿಂದ ದಿಟ್ಟ ಮುನ್ನೋಟವನ್ನು ನಿರೀಕ್ಷಿಸುವ ಕಾಲ ಇದಾಗಿದೆ” ಎಂದೂ ಅವರು ಹೇಳಿದರು.



