Flash News

ಸಮುದಾಯದ ಪರ ನಿಂತಿದ್ದಕ್ಕೆ ಪಕ್ಷದಲ್ಲಿ ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿದೆ: ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಭೆಯಲ್ಲಿ ಆಕ್ರೋಶ

ಮಂಗಳೂರು: ಸಮುದಾಯದ ಪರ ನಿಲ್ಲುವ ಮುಸ್ಲಿಂ ಮುಖಂಡರನ್ನು ಭಿನ್ನಮತೀಯರು ಅಂತ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ನಡೆದಿರುವ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಅಲ್ಪಸಂಖ್ಯಾತ ಘಟಕದ ನಾಯಕರು ಮತ್ತು ಮುಸ್ಲಿಂ ಮುಖಂಡರು ಕೆ.ಕೆ‌ ಶಾಹುಲ್ ಹಮೀದ್ ನೇತೃತ್ವದಲ್ಲಿ ಸಭೆ ನಡೆಸಿದರು.‌ ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮತ್ತು ಅಲ್ಪಸಂಖ್ಯಾತ ಘಟಕದ ಪ್ರಮುಖರು ಭಾಗಿಯಾಗಿದ್ದರು. ಸಭೆಯಲ್ಲಿ ಈಶ್ವರಮಂಗಲದ ಶೂಟೌಟ್ ಪ್ರಕರಣ ಪ್ರಸ್ತಾಪವಾಗಿದ್ದು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಲು ಸರ್ಕಾರವನ್ನು ಆಗ್ರಹಿಸುವಂತೆ ಮುಖಂಡರು ಒತ್ತಾಯಿಸಿದರು. ಈ ಸಂಬಂಧ ಪಕ್ಷದ ಜಿಲ್ಲಾ ಮುಖಂಡರ ಜೊತೆ ಮಾತುಕತೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ

ಸಮುದಾಯದ ಪರ ನಿಲ್ಲುವ ಮುಸ್ಲಿಂ ಮುಖಂಡರನ್ನು ಭಿನ್ನಮತೀಯರು ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದಾಗ ಕೆ.ಕೆ‌ ಶಾಹುಲ್ ಹಮೀದ್ ತನ್ನ ಸಮುದಾಯದ ಪರ ಬಲವಾಗಿ ನಿಂತಿದ್ದಕ್ಕೆ ಅವರನ್ನು ಬಂಡಾಯ ನಾಯಕ ಎಂದು ಬಿಂಬಿಸಿ ಅವರನ್ನು ಪಕ್ಷದಲ್ಲಿ ಕಡೆಗಣಿಸುವ ಪ್ರಯತ್ನಗಳು ನಡೀತು ಎಂದು ಸಭೆಯಲ್ಲಿ ಕೆಲವರು ಅಸಮಾಧಾನ ತೋಡಿಕೊಂಡರು ಎಂದು ತಿಳಿದುಬಂದಿದೆ.