Flash News

ಉಳ್ಳಾಲ ದರ್ಗಾ ಕಮಿಟಿಯಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ಬಿಜಿ ಹನೀಫ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸದಸ್ಯರ ಆಗ್ರಹ

ಮಂಗಳೂರು: ಉಳ್ಳಾಲದ ಸಯ್ಯದ್ ಮದನಿ ದರ್ಗಾದಲ್ಲಿ ಮತ್ತೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ಆಡಳಿತಕ್ಕೆ ಬಂದು ಅಧ್ಯಕ್ಷರಾಗಿರುವ ಬಿ.ಜಿ ಹನೀಫ್ ಹಾಜಿ ಮತ್ತು ಪದಾಧಿಕಾರಿಗಳು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದರ ಬಗ್ಗೆ ವಕ್ಫ್ ಇಲಾಖೆಗೆ ದೂರಿತ್ತರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದರ್ಗಾ ಕಮಿಟಿಯ ಸದಸ್ಯರೇ ದೂರಿದ್ದಾರೆ.

ಸುದ್ದಿಗೋಷ್ಟಿ ನಡೆಸಿದ ಅವರು, ವಕ್ಫ್ ಇಲಾಖೆಗೆ ಸೇರಿದ ಉಳ್ಳಾಲದ ಸಯ್ಯದ್ ಮದನಿ ದರ್ಗಾ ಮತ್ತು ಜುಮಾ ಮಸೀದಿಯ ಆಡಳಿತದಲ್ಲಿ ಭಾರೀ ಅವ್ಯವಹಾರ ಆಗುತ್ತಿದ್ದು, ಈ ಬಗ್ಗೆ ನಾವು ಪ್ರಶ್ನೆ ಮಾಡಿದರೂ ಕ್ಯಾರೆನ್ನುತ್ತಿಲ್ಲ. ವಕ್ಫ್ ಇಲಾಖೆಯವರಿಗೆ, ಕ್ಷೇತ್ರದ ಶಾಸಕ ಯುಟಿ ಖಾದರ್ ಅವರಿಗೂ ದೂರು ನೀಡಿದ್ದೇವೆ. ಆರ್ಟಿಐನಲ್ಲಿ ಮಾಹಿತಿ ಕೇಳಿದರೂ ಮಾಹಿತಿ ನೀಡುತ್ತಿಲ್ಲ. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಉಳ್ಳಾಲ ದರ್ಗಾ ಉರೂಸಿಗೆ ರಾಜ್ಯ ಸರಕಾರದಿಂದ ಏಳು ಕೋಟಿ ಅನುದಾನ ಮಂಜೂರಾಗಿದ್ದು, ಇದಲ್ಲದೆ ದಾನಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹ ಆಗಿದೆ.

ಇದರ ಬಗ್ಗೆ ಲೆಕ್ಕ ಕೇಳಿದರೆ ಅದನ್ನು ಕೊಡುತ್ತಿಲ್ಲ. ದರ್ಗಾಕ್ಕೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಬಗ್ಗೆಯೂ ರಹಸ್ಯ ಕಾಪಾಡಿದ್ದಾರೆ. ದರ್ಗಾ ಕಮಿಟಿಯಲ್ಲಿ 55 ಮಂದಿ ಸದಸ್ಯರಿದ್ದರೂ ಕೇವಲ ಏಳೆಂಟು ಮಂದಿ ಸೇರಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸದಸ್ಯರ ಸಭೆ ಕರೆಯದೆ ತಮಗೆ ಬೇಕಾದಂತೆ ನಿರ್ಣಯಗಳನ್ನು ಮಾಡಿಕೊಂಡು ಖರ್ಚು- ವೆಚ್ಚದ ಲೆಕ್ಕ ತೋರಿಸದೆ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆಡಳಿತ ವಹಿಸಿಕೊಂಡು ಎರಡು ವರ್ಷ ಕಳೆದರೂ ಒಂದು ಬಾರಿಯೂ ಮಹಾಸಭೆ ನಡೆಸಿಲ್ಲ. ಲೆಕ್ಕಪತ್ರ ಕೇಳಿದ ದರ್ಗಾ ಕಮಿಟಿಯ 30ಕ್ಕೂ ಹೆಚ್ಚು ಸದಸ್ಯರನ್ನು ಉಚ್ಛಾಟಿಸುವ ಬೆದರಿಕೆ ಹಾಕಿ ಸಭೆಗಳಿಗೆ ಕರೆಯದೆ ದೂರ ಇಟ್ಟಿದ್ದಾರೆ.