Flash News

ಅಂಡರ್‌ವರ್ಡ್ ಡಾನ್ ಕಲಿ ಯೋಗೀಶ್ ಪ್ರಕರಣ: ಸಹಚರನಿಗೆ ಹೈಕೋರ್ಟ್ ಜಾಮೀನು


ಬೆಂಗಳೂರು, ಆಗಸ್ಟ್ 3: ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 25/2025 ಹಾಗೂ ವಿಶೇಷ ಪ್ರಕರಣ ಸಂಖ್ಯೆ 365/2025ಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮೊಹಮ್ಮದ್ ರಫೀಕ್ @ ಮುಡಿಪು ರಫೀಕ್ (ಆರೋಪಿ ಸಂಖ್ಯೆ–2) ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಉದ್ಯಮಿ ರೊನಾಲ್ಡ್ ಫರ್ನಾಂಡಿಸ್ ಅವರಿಗೆ ವಿದೇಶಿ ದೂರವಾಣಿ ಸಂಖ್ಯೆಗಳ ಮೂಲಕ ಕರೆ ಮಾಡಿ ₹3 ಕೋಟಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕುಟುಂಬ ಸಮೇತ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪದ ಮೇರೆಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆಯಲ್ಲಿ ಈ ಕೃತ್ಯ ಅಂಡರ್‌ವರ್ಡ್ ಡಾನ್ ಕಲಿ ಯೋಗೀಶ್ @ ಯೋಗೀಶ್ ಬಂಗೇರ ನೇತೃತ್ವದ ಸಂಘಟಿತ ಅಪರಾಧ ಜಾಲದ ಭಾಗವಾಗಿದೆ ಎಂದು ಆರೋಪಿಸಿ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ಆದರೆ, ಪಿಟಿಷನರ್ ಪರ ವಕೀಲರು ತಮ್ಮ ಕಕ್ಷಿದಾರನ ಪಾತ್ರ ಕೇವಲ ಕಾನ್ಫರೆನ್ಸ್ ಕರೆ ವ್ಯವಸ್ಥೆಗೊಳಿಸುವುದಕ್ಕೆ ಮಾತ್ರ ಸೀಮಿತವಾಗಿದ್ದು, ಸಂಘಟಿತ ಅಪರಾಧದಲ್ಲಿ ನೇರ ಭಾಗವಹಿಸಿರುವುದು ಅಥವಾ ಅಪರಾಧ ಉದ್ದೇಶ ಹೊಂದಿದ್ದಾನೆ ಎಂಬುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರು, ನಿಗದಿತ ಷರತ್ತುಗಳಿಗೆ ಒಳಪಟ್ಟು ಮೊಹಮ್ಮದ್ ರಫೀಕ್ ಅವರಿಗೆ ಜಾಮೀನು ಮಂಜೂರು ಮಾಡಿದರು. ಪ್ರಕರಣದ ವಿಚಾರಣೆ ಮೈಸೂರು ವಿಶೇಷ ನ್ಯಾಯಾಲಯದಲ್ಲಿ ಮುಂದುವರಿಯಲಿದ್ದು, ಆರೋಪಗಳ ಸತ್ಯಾಸತ್ಯತೆಯನ್ನು ವಿಚಾರಣೆಯ ಅಂತ್ಯದಲ್ಲಿ ನ್ಯಾಯಾಲಯ ನಿರ್ಧರಿಸಲಿದೆ.
ಮೊಹಮ್ಮದ್ ರಫೀಕ್ ಪರವಾಗಿ ವಕೀಲ ದಿಲ್‌ರಾಜ್ ರೋಹಿತ್ ಸಿಕ್ವೇರಾ ವಾದ ಮಂಡಿಸಿದರು.