Flash News

ಸುರತ್ಕಲ್‌–ಬಿ.ಸಿ.ರೋಡ್‌ ಹೆದ್ದಾರಿ ಎನ್‌ಎಚ್‌ಎಐಗೆ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

ಮಂಗಳೂರು: ಸುರತ್ಕಲ್–ಮಂಗಳೂರು– ಬಿ.ಸಿ.ರೋಡ್‌ ರಾಷ್ಟ್ರೀಯ ಹೆದ್ದಾರಿಯು ಪ್ರಸ್ತುತ ನವಮಂಗಳೂರು ಬಂದರು ರಸ್ತೆ ಕಂಪನಿ ಅಧೀನದಲ್ಲಿದ್ದು, ಇದರ ನಿರ್ವಹಣೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುದಾನ ಒದಗಿಸುತ್ತಿಲ್ಲ. ಈ ಹೆದ್ದಾರಿ ಶೀಘ್ರವೇ ಎನ್‌ಎಚ್‌ಎಐಗೆ ಹಸ್ತಾಂತರವಾಗಲಿದ್ದು, ನಿರ್ವಹಣೆ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಹೆದ್ದಾರಿಯ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಸರಿಪಡಿಸಿ ಚತುಷ್ಫಥವನ್ನಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ತಯಾರಿಸುವ ಏಜೆನ್ಸಿ ಗೊತ್ತುಪಡಿಸಲು ಟೆಂಡರ್ ಕರೆಯಲಾಗಿದೆ. ಇದರ ಅಭಿವೃದ್ಧಿಗೆ ಎಲ್ಲ ಪಾಲುದಾರರ ಜೊತೆ ಚರ್ಚಿಸಿ ಯೋಜನೆ ರೂಪಿಸಲಾಗುತ್ತದೆ’ ಎಂದರು.

ಕೂಳೂರು ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕ್ಯಾ.ಚೌಟ, ‘ಇನ್ನೂ ಗುತ್ತಿಗೆದಾರನ ಮೇಲೆ ಏಕೆ ಕ್ರಮವಾಗಿಲ್ಲ’ ಎಂದು ಪ್ರಶ್ನಿಸಿದರು.