ವಿಜಯಪುರ: ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಬೇಕು ಎಂಬ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ. ಇದು ಹಕ್ಕೊತ್ತಾಯವಲ್ಲ, ಬದಲಿಗೆ ನಾವು ಮಾಡಿರುವ ಕೆಲಸಕ್ಕೆ ಪ್ರಮುಖ್ಯತೆ ಸಿಗಬೇಕು ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ (ನ.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಿದೆ. ಕೆಲ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡಿ, ಅವರ ಮೂಲಕ ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕು ಎಂಬ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿದೆ. ಹೊಸಬರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳು ಹಾಗೂ ಎಐಸಿಸಿ ತೆಗೆದುಕೊಳ್ಳತ್ತದೆ ಎಂದರು.
ಈ ವೇಳೆ ತಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆಯಾ ಎಂಬ ಪ್ರಶ್ನೆಗೆ ಸಲೀಂ ಅಹ್ಮದ್, ಪಕ್ಷ ಕಾರ್ಯಾಧ್ಯಕ್ಷನಾಗಿ ನಾನೂ ಮೂರು ವರ್ಷ ಕೆಲಸ ಮಾಡಿದ್ದೇನೆ. 2023ರಲ್ಲಿ ಪಕ್ಷಕ್ಕೆ ಅಧಿಕಾರಕ್ಕೆ ಬಂದ ನಂತರ ನಾಲ್ವರು ಕಾರ್ಯಾಧ್ಯಕ್ಷರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಆದರೆ, ನನ್ನನ್ನು ಬಿಟ್ಟು ಮೂವರನ್ನು ಮಾತ್ರ ಮಾಡಿದರು. ನನ್ನನ್ನು ಬಿಟ್ಟಿದ್ದು ಯಾಕೆ ಎಂಬುವುದು ಇವತ್ತಿಗೂ ನನಗೆ ಗೊತ್ತಿಲ್ಲ. ನಾನು ಒಬ್ಬ ಕಾರ್ಯಕರ್ತನಾಗಿ 44 ವರ್ಷಗಳ ಪಕ್ಷಕ್ಕೆ ದುಡಿದಿದ್ದೇನೆ. ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನಮ್ಮಂತವರ ಪಾತ್ರ ಸಹ ಇದೆ. ಹೀಗಾಗಿ ಈ ಸಲ ವರಿಷ್ಠರು, ಸಿಎಂ ಹಾಗೂ ಡಿಸಿಎಂ ಅವಕಾಶ ಮಾಡಿಕೊಡುವ ವಿಶ್ವಾಸ ಇದೆ. ಜತೆಗೆ ನಮ್ಮ ನಾಯಕರ ಮೇಲೆ ನನಗೆ ನಂಬಿಕೆ ಇದೆ ಎಂದು ತಿಳಿಸಿದರು.
ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ. ಸಣ್ಣ-ಸಣ್ಣ ತಪ್ಪುಗಳು ಹಾಗೂ ವ್ಯತ್ಯಾಸಗಳು ಇದ್ದರೆ ಸರಿ ಮಾಡಿಕೊಳ್ಳಬೇಕು. ರಾಜ್ಯ ವಿಭಜನೆಯ ಹೇಳಿಕೆಯನ್ನು ಯಾರೂ ಕೊಡಬಾರದು. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನ ವಿಶೇಷ ಕಲಂ 371 (ಜೆ) ಜಾರಿ ಮಾಡಿದ್ದು, ಅಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ರಾಜ್ಯ ಒಟ್ಟಾಗಿ ಇರಬೇಕು ಎಂಬುವುದೇ ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ಸರ್ಕಾರದ ನಿಲುವು. ಖಾಲಿ ಉದ್ಯೋಗಗಳ ಭರ್ತಿಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಲೀಂ ಅಹ್ಮದ್ ತಿಳಿಸಿದರು.


