Flash News

ಕರಾವಳಿಗೆ ಮತ್ತೊಂದು ವಿಮಾನ ನಿಲ್ದಾಣ । ಉಡುಪಿಯಲ್ಲಿ ಟೇಕಾಫ್’ಗೆ ಗ್ರೀನ್ ಸಿಗ್ನಲ್

ಉಡುಪಿಗೆ ಏರ್ ಪೋರ್ಟ್ ಬೇಕೆನ್ನುವ ಎರಡು ದಶಕಗಳ ಕನಸಿಗೆ ಈಗ ರೆಕ್ಕೆಪುಕ್ಕ ಮೂಡಿದೆ. ಪಡುಬಿದ್ರಿಯಲ್ಲಿ ಏರ್ ಪೋರ್ಟ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರದ ಐಡಿಡಿ(ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ)ಗೆ ಉಡುಪಿ ಜಿಲ್ಲಾಡಳಿತ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿದೆ.

ಸಾಮಾನ್ಯ ನಾಗರಿಕರೂ ವಿಮಾನದಲ್ಲಿಪ್ರಯಾಣಿಸುವ ಕನಸು ಬಿತ್ತಿದ ಪ್ರಧಾನಿ ಮೋದಿ ಆಶಯದಂತೆ ಜಾರಿಗೆ ಬಂದ ಉಡಾನ್ 1(ಉಡೇ ದೇಶ್ ಕಾ ಆಮ್ ನಾಗರಿಕ್ ) ಬಳಿಕ ಉಡಾನ್ 2 ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣದ ಚಿಂತನೆ ನಡೆದಿದೆ. 935 ಎಕರೆ ಭೂಮಿ ಲಭ್ಯವಿದ್ದು, 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಸಾಧ್ಯತೆ ಇದೆ. ಇದು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕತೆಗೆ ಪೂರಕವಾಗಲಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ನ.28ರಂದು ನಡೆಯುವ ಲಕ್ಷ ಕಂಠ ಗೀತಾಗಾಯನ, ಪಾರಾಯಣ ಹಾಗೂ ಸುವರ್ಣಮಯ ತೀರ್ಥಮಂಟಪ ಹಾಗೂ ಸುವರ್ಣ ಹೊದಿಸಿದ ಕನಕನ ಕಿಂಡಿಯ ಸಮರ್ಪಣೆಗೆ ಬರುವ ಪ್ರಧಾನಿ ಮೋದಿಗೂ ಏರ್ ಪೋರ್ಟ್ ಬೇಡಿಕೆ ಸಲ್ಲಿಕೆಯಾಗಲಿದೆ.

ತಾಂತ್ರಿಕ ಸಮಸ್ಯೆ ಏನು?: ಬಜ್ಪೆ ವಿಮಾನ ನಿಲ್ದಾಣಕ್ಕೂ ಉಡುಪಿ ಜಿಲ್ಲೆಯಲ್ಲಿಪ್ರಸ್ತಾವಿತ ವಿಮಾನ ನಿಲ್ದಾಣಕ್ಕೂ ಇರುವ ಅಂತರವನ್ನು ಲೆಕ್ಕ ಹಾಕಿ 150 ನಾಟಿಕಲ್ ಒಳಗಿರುವ ಹಿನ್ನೆಲೆಯಲ್ಲಿಅನುಮತಿಯ ತಕರಾರು ತೆಗೆಯಲಾಗುತ್ತಿದೆ. ಬಜ್ಪೆ ಮತ್ತು ಪ್ರಸ್ತಾಪಿತ ವಿಮಾನ ನಿಲ್ದಾಣ ಪ್ರದೇಶವಾದ ಪಡುಬಿದ್ರಿ ನಡುವೆ ಕೇವಲ 30 ಕಿ.ಮೀ. ಅಂತರವಿದೆ.

ಹೀಗಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಪಡುಬಿದ್ರಿಯನ್ನು ಟ್ವಿನ್ ಏರ್ ಪೋರ್ಟ್ ಅಥವಾ ಟರ್ಮಿನಲ್ 2(ಮುಂಬಯಿ, ದಿಲ್ಲಿಮಾದರಿ) ನೆಲೆಯಲ್ಲಿಪರಿಗಣಿಸಲು ಹಾಗೂ ಮಂಗಳೂರಿನಲ್ಲಿರನ್ ವೇ ವಿಸ್ತರಣೆ ಅಸಾಧ್ಯವೆನ್ನುವುದನ್ನು ಮನವಿಯಲ್ಲಿಮನದಟ್ಟು ಮಾಡುವ ಯತ್ನ ನಡೆದಿದೆ.

ಅದಾನಿ ಯುಪಿಸಿಎಲ್ ಎರಡನೇ ಹಂತದ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಜನರ ವಿರೋಧ ಹಾಗೂ ಪರಿಸರ ತಕರಾರಿನ ಹಿನ್ನೆಲೆಯಲ್ಲಿಕೈಬಿಟ್ಟಿದೆ. 546 ಎಕರೆ ಭೂಮಿ ಕೆಐಎಡಿಬಿ ಕೈಯಲ್ಲಿದೆ. ಜತೆಗೆ ಖಾಸಗಿ, ಸರಕಾರಿ ಭೂಮಿ ಸೇರಿದರೆ ಒಟ್ಟು 935 ಎಕರೆ ಲಭ್ಯವಾಗಲಿದೆ.

ಮಂಗಳೂರು, ಉಡುಪಿಯಲ್ಲಿವೆಚ್ಚ ಎಷ್ಟು?

*ಮಂಗಳೂರು ರನ್ ವೇ ವಿಸ್ತರಣೆ ನಿಟ್ಟಿನಲ್ಲಿಲ್ಯಾಂಡ್ ಫಿಲ್ಲಿಂಗ್ ಸಹಿತ ಒಟ್ಟಾರೆ 33 ಸಾವಿರ ಕೋಟಿ ರೂ. ಅಗತ್ಯವಿದೆ.

*ಪಡುಬಿದ್ರಿಯಲ್ಲಿ500ರಿಂದ 1,000 ಎಕರೆ ಭೂಮಿ ಲಭ್ಯವಿರುವ ಹಿನ್ನೆಲೆಯಲ್ಲಿ10 ಸಾವಿರ ಕೋಟಿ ರೂ. ವೆಚ್ಚದಲ್ಲಿವಿಮಾನ ನಿಲ್ದಾಣ ನಿರ್ಮಾಣ ಸಾಧ್ಯ.

ಗ್ರೀನ್ ಸಿಗ್ನಲ್ ಸಿಕ್ಕರೆ ಅಧ್ಯಯನ ವರದಿ

ಹೆಲಿ ಟ್ಯಾಕ್ಸಿ ಸಹಿತ ಟೂರಿಸಂ ಹಬ್ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುವ ಪಡುಬಿದ್ರಿಯಲ್ಲಿಏರ್ ಪೋರ್ಟ್ ಸಾಧ್ಯತೆ, ಸಾಧಕ-ಬಾಧಕ, ಲಾಭ-ನಷ್ಟಗಳ ಅಧ್ಯಯನ ವರದಿ ಅಗತ್ಯವಿದೆ. ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೂ ವಿಮಾನ ನಿಲ್ದಾಣ ಪೂರಕವಾಗಲಿದೆ. ರಸ್ತೆ, ರೈಲಿನಲ್ಲಿಉಡುಪಿಗೆ ಬರುವ ಪ್ರಯಾಣಿಕರ ಒತ್ತಡವೂ ಕಡಿಮೆಯಾಗಲಿದೆ.

ಉಡುಪಿ, ಮಂಗಳೂರನ್ನು ಐಟಿ ಸಿಲಿಕಾನ್ ಸಿಟಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿಸ್ಪರ್ಧೆ ಇಲ್ಲ. ಪರಸ್ಪರ ಸೌಹಾರ್ದ ಅಗತ್ಯ. ಪಡುಬಿದ್ರಿಯಲ್ಲಿಏರ್ ಪೋರ್ಟ್ ನಿರ್ಮಾಣದಿಂದ ಉದ್ಯೋಗ ಸೃಷ್ಟಿ, ಆರ್ಥಿಕತೆ ವೃದ್ಧಿಯಾಗಲಿದೆ.

-ಸ್ವರೂಪಾ ಟಿ.ಕೆ., ಜಿಲ್ಲಾಧಿಕಾರಿ, ಉಡುಪಿ