ಉಳ್ಳಾಲ: ಕಣ್ಣಿನ ಗುಡ್ಡೆ ಕಿತ್ತೋದ ಸ್ಥಿತಿಯಲ್ಲಿ ಭೀಕರ ದಾಳಿಗೀಡಾಗಿ ಸಾವನ್ನಪ್ಪಿರುವ ವ್ಯಕ್ತಿಯೋರ್ವನ ಮೃತದೇಹವು ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ಸಿಕ್ಕಿದ್ದು, ಕೊಲೆಯೋ ಅಥವಾ ಪ್ರಾಣಿ ದಾಳಿಯಿಂದ ಮೃತಪಟ್ಟಿದ್ದೋ ಎಂಬ ಬಗ್ಗೆ ಶಂಕೆ ಮೂಡಿದೆ.
ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ (53) ನಿಗೂಢವಾಗಿ ಸಾವನ್ನಪ್ಪಿರುವ ವ್ಯಕ್ತಿ. ಕುಂಪಲ ಬೈಪಾಸಿನ ಸಾಯಿ ಲಾಂಡ್ರಿಯ ಸಿಟೌಟ್ ನಲ್ಲಿ ನೋಟಿನ ಕಂತೆ ಬಿದ್ದಿದ್ದು ರಕ್ತ ಚೆಲ್ಲಿದೆ. ನೋಟಿನ ಕಂತೆಯ ಬಳಿಯೇ ದಯಾನಂದ್ ಅವರ ಒಂದು ಕಣ್ಣಿನ ಗುಡ್ಡೆ ಬಿದ್ದಿದೆ. ಲಾಂಡ್ರಿ ಎದುರಲ್ಲೇ ದಯಾನಂದ್ ಮೇಲೆ ದಾಳಿ ನಡೆದಿದೆ.
ಇಂದು ಬೆಳಗ್ಗೆ ದಯಾನಂದ್ ಸಾಯಿ ಲಾಂಡ್ರಿಯ ಎದುರಿನ ಖೈರುನ್ನೀಸಾ ಎಂಬವರ ಮನೆಯ ಅಂಗಳದಲ್ಲಿ ಜೀವನ್ಮರಣ ಹೋರಾಟದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆನ್ನಲಾಗಿದೆ. ಪಕ್ಕದಲ್ಲೇ ಮುಖಕ್ಕೆ ರಕ್ತ ಲೇಪಿಸಿದ್ದ ಬೀದಿ ನಾಯಿಯೊಂದು ಇದ್ದು ಜನರನ್ನ ಕಂಡು ಓಡಿ ಹೋಗಿದೆ. ಸ್ಥಳೀಯರು ಘಟನೆ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಯಾನಂದ್ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್., ಎಸಿಪಿ ವಿಜಯ ಕ್ರಾಂತಿ, ಇನ್ಸ್ ಪೆಕ್ಟರ್ ವಿರೂಪಾಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


