Flash News

NDA ಕ್ಲೀನ್ ಸ್ವೀಪ್: ಮಹಾಘಟಬಂಧನ್‌ ಸೋಲಿಗೆ ಕಾರಣಗಳು ಇಲ್ಲಿದೆ

ಇಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಪ್ರಚಂಡ ಗೆಲುವಿನತ್ತ ಮುನ್ನುಗ್ಗುತ್ತಿದೆ. ಸದ್ಯದ ಟ್ರೆಂಡ್ ಪ್ರಕಾರ ಎನ್​ಡಿಎ 197 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ಮಹಾಘಟಬಂಧನ್‌ಗೆ ಭಾರೀ ಹಿನ್ನಡೆಯಾಗಿದ್ದು, ಕೇವಲ 40 ಕ್ಷೇತ್ರಗಳಿ ಮುನ್ನಡೆ ಸಾಧಿಸಿದೆ.

ಮಹಾಘಟಬಂಧನ್‌ ಕೂಟವು ಮತದಾನಕ್ಕೆ ಮೊದಲೇ ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಅಲ್ಲದೆ ಉದ್ಯೋಗ ಖಾತರಿ ಸೇರಿ ತಮ್ಮ ಪ್ರಣಾಳಿಕೆಯಲ್ಲಿ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ ಇದು ಯಾವುದೂ ಕೈಹಿಡಿಯಲಿಲ್ಲ. ತೇಜಸ್ವಿ ಯಾದವ್‌ ನಾಯಕತ್ವದ ಆರ್‌ಜೆಡಿ ಹಿನ್ನಡೆಗೆ ಕಾರಣವಾದ ಅಂಶಗಳು ಯಾವುದು ಎನ್ನುವ ಬಗ್ಗೆ ಇಲ್ಲಿದೆ ಒಂದು ವರದಿ.

52 ಮಂದಿ ಯಾದವ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆರ್‌ ಜೆಡಿಯ ತೀರ್ಮಾನ ಒಳ ಏಟು ನೀಡಿದೆ. ಪಕ್ಷದ ಒಟ್ಟು ಅಭ್ಯರ್ಥಿಗಳಲ್ಲಿ (144) ಸರಿಸುಮಾರು 36% ರಷ್ಟು ಯಾದವ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆರ್‌ಜೆಡಿಯ ನಿರ್ಧಾರವು ಒಂದು ಪ್ರಮುಖ ತಪ್ಪು ಲೆಕ್ಕಾಚಾರವೆಂದು ಸಾಬೀತಾಗಿದೆ. 14 % ಯಾದವ್‌ ಜನಸಂಖ್ಯೆಯಿದ್ದರೂ ಇದು ರಿವರ್ಸ್‌ ಎಫೆಕ್ಟ್‌ ನೀಡಿದೆ. ಆರ್‌ಜೆಡಿಯ ʼಯಾದವ್ ರಾಜ್‌ʼ ಇಮೇಜ್‌ ಯಾದವರಲ್ಲದವರಿಗೆ ಪರಿಣಾಮ ಬೀರಿದೆ. ಮೇಲ್ಜಾತಿಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳನ್ನು ಆರ್‌ಜೆಡಿಯಿಂದ ದೂರ ಮಾಡಿ ಎನ್‌ ಡಿಎಯತ್ತ ವಾಲುವಂತೆ ಮಾಡಿದೆ.

ತೇಜಸ್ವಿ ಯಾದವ್ ಅವರು ತಮ್ಮ ಮಿತ್ರಪಕ್ಷಗಳಾದ ಕಾಂಗ್ರೆಸ್, ಎಡಪಕ್ಷಗಳು ಮತ್ತು ಸಣ್ಣ ಪಾಲುದಾರರನ್ನು ಸಮಾನವಾಗಿ ಪರಿಗಣಿಸುವಲ್ಲಿ ವಿಫಲರಾಗಿದ್ದು ಹೊಡೆತ ಬಿದ್ದಿದೆ. ಸೀಟು ಹಂಚಿಕೆ ಗಲಾಟೆಗಳು, ತೇಜಸ್ವಿಯ ಆರ್‌ಜೆಡಿ ಕೇಂದ್ರಿತ ಧೋರಣೆಯು ಆಂತರಿಕ ಹೊಡೆತ ನೀಡಿದೆ. ಪ್ರಣಾಳಿಕೆಯನ್ನು ತೇಜಸ್ವಿಯ ಪ್ರಮಾಣ ಎಂದು ತೋರಿಸುವುದು, ರಾಹುಲ್‌ ಗಾಂಧಿಯ ಅವಗಣನೆ ಕೂಡಾ ಮಹಾಘಟಬಂಧನ್‌ನ ಸಾಮರ್ಥ್ಯಕ್ಕೆ ಪೆಟ್ಟು ನೀಡಿತು.

ಪ್ರತಿ ಮನೆಗೆ ಸರ್ಕಾರಿ ಉದ್ಯೋಗ, ಪಿಂಚಣಿ ಯೋಜನೆಗಳು ಮತ್ತು ಮದ್ಯ ನಿಷೇಧವನ್ನು ಪರಿಶೀಲಿಸುವಂತಹ ಬೃಹತ್, ಜನಪ್ರಿಯ ಭರವಸೆಗಳನ್ನು ತೇಜಸ್ವಿ ನೀಡಿದ್ದರು. ಆದರೆ ನಿರ್ದಿಷ್ಟ ಅನುಷ್ಠಾನ ಯೋಜನೆಯೊಂದಿಗೆ ಅವುಗಳನ್ನು ಜನರಿಗೆ ತಲುಪಿಸಲು ವಿಫಲರಾದರು. “ಪ್ರತಿ ಮನೆಗೂ ಕೆಲಸ” ಎಂಬ ಭರವಸೆಗೆ ಹಣಕಾಸು ಒದಗಿಸುವುದು ಮತ್ತು ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ಸ್ಪಷ್ಟವಾದ ನೀಲನಕ್ಷೆ ಇಲ್ಲದಿರುವುದು ಮತದಾರರ ನಂಬಿಕೆ ಗಳಿಸದೇ ಇರುವಂತೆ ಮಾಡಿತು.

ತೇಜಸ್ವಿಯವರು ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರ ಪರಂಪರೆಯನ್ನು ಅನುಸರಿಸಲು ಮಾಡಿದ ಪ್ರಯತ್ನಗಳಲ್ಲಿನ ಗೊಂದಲಗಳು ಕೂಡಾ ಹಿನ್ನಡೆಗೆ ಕಾರಣವಾಯಿತು. ತೇಜಸ್ವಿ ಯಾದವ್ ಒಂದೆಡೆ ತಂದೆಯ ಸಾಮಾಜಿಕ ನ್ಯಾಯದ ವಿಚಾರವನ್ನು ಅಪ್ಪಿಕೊಂಡರೂ, ಮತ್ತೊಂದೆಡೆಯಲ್ಲಿ ಪ್ರಚಾರ ಪೋಸ್ಟರ್‌ಗಳಲ್ಲಿ ಲಾಲು ಅವರ ಫೋಟೋ ಇರುವಿಕೆಯನ್ನು ಕಡಿಮೆ ಮಾಡುವ ಮೂಲಕ “ಜಂಗಲ್ ರಾಜ್” ಇಮೇಜ್‌ನಿಂದ ದೂರವಿರಲು ಪ್ರಯತ್ನಿಸಿದರು. ಈ ಗೊಂದಲವೂ ಹಿನ್ನಡೆಗೆ ಕಾರಣವಾಯಿತು.