Flash News

ಫರಂಗಿಪೇಟೆ | ರೈಲ್ವೆ ಇಲಾಖೆಯ ಅರ್ಧಂಬರ್ಧ ಕಾಮಗಾರಿ: ಸ್ಪೀಕರ್ ಯು.ಟಿ ಖಾದರ್ ಕರೆ ಬೆನ್ನಲ್ಲೇ ಇಲಾಖೆ ಸ್ಪಂದನೆ

ಫರಂಗಿಪೇಟೆ: ಅಮ್ಮೆಮ್ಮಾರ್- ಫರಂಗಿಪೇಟೆಯಲ್ಲಿ ರೈಲ್ವೆ ಕಾಮಗಾರಿ ಅರ್ಧಂಬರ್ಧ ಪೂರ್ಣಗೊಂಡಿದ್ದು, ಸ್ಪೀಕರ್ ಯು.ಟಿ ಖಾದರ್ ಕರೆ ಬೆನ್ನಲ್ಲೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರದ ಭರವಸೆ ನೀಡಿದ್ದಾರೆ.

ಅಮ್ಮೆಮ್ಮಾರ್ ನಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ಇಲ್ಲಿ ಹಲವು ವರ್ಷಗಳಿಂದ ರೈಲ್ವೆ ಅಂಡರ್ ಪಾಸ್ ಮಾಡಲಾಗಿದ್ದು, ಅದು ಕೂಡ ಅರ್ಧಂಬರ್ಧ ಮಾಡಲಾಗಿದೆ. ಅಲ್ಲಿ ಮೂಲ ಸೌಕರ್ಯ ಕೂಡ ಸರಿಯಾಗಿಲ್ಲ. ಇದರಿಂದ ಜನಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ರೈಲು ಹಾದು ಹೋಗಲು ಕನಿಷ್ಠ ಅರ್ಧಗಂಟೆ ಹಿಡಿಯುತ್ತದೆ‌. ರೈಲ್ವೆ ಇಲಾಖೆ ಈಗಾಗಲೇ ಮಾಡಿರುವ ಕಾಮಗಾರಿ ಸರಿಯಾಗಿಲ್ಲ. ಈ ಹಿನ್ನಲೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸ್ಪೀಕರ್ ಯು.ಟಿ ಖಾದರ್ ಬಳಿ ಸಮಸ್ಯೆ ಹೇಳಿದ್ದಾರೆ. ಖಾದರ್ ಅವರು ರೈಲ್ವೆ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದಾರೆ‌. ಅಲ್ಲದೆ, ಅಧಿಕಾರಿ ಬರುವಾಗ ಉಮರ್ ಫಾರೂಕ್, ರಮ್ಲಾನ್ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದರು.

ಈ ಹಿನ್ನೆಲೆ ಬುಧವಾರ ರೈಲ್ವೆ ಅಧಿಕಾರಿಗಳು ಅಮ್ಮೆಮ್ಮಾರ್‌ಗೆ ಭೇಟಿ ನೀಡಿದ್ದು, ಸೋಮವಾರದಿಂದ ಕಾಮಗಾರಿ ಪ್ರಾರಂಭ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಜನಾಬ್ ಅಬುಸಾಲಿ ಉಸ್ತಾದ್, ಅರಫಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಮೊಹಮ್ಮದ್ ಬುಖಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಅಮ್ಮೆಮ್ಮಾರ್, ಮೊಹಮ್ಮದ್ ಅನ್ಸ್ ಅಮ್ಮೆಮ್ಮಾರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಬಶೀರ್ ತೆಂಡೇಲ್, ಸುಲೈಮಾನ್ ಉಸ್ತಾದ್‍, ಹನೀಫ್ ಅಮ್ಮೆಮ್ಮಾರ್, ಮುಸ್ತಾಫಾ ಅಮ್ಮೆಮ್ಮಾರ್ ಇತರರು ಉಪಸ್ಥಿತರಿದ್ದರು.