ಮಂಗಳೂರು: ಯಕ್ಷಗಾನಕ್ಕೆ ಸಂಬಂಧಪಡದ ಕಾರ್ಯಕ್ರಮವೊಂದರಲ್ಲಿ ಕಲಾವಿದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಬೇಕು ಮತ್ತು ಅವರ ಮೇಲೆ ಕೇಸ್ ದಾಖಲಿಸಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಳಿಮಲೆ ಅವರು ಆಡಿರುವ ಮಾತಿನಿಂದಾಗಿ ಯಕ್ಷಗಾನ ಕಲಾವಿದರಿಗೆ, ಯಕ್ಷಗಾನ ಮೇಳವವರಿಗೆ, ಯಕ್ಷಗಾನ ಅಭಿಮಾನಿಗಳಿಗೆ ಸೇರಿದಂತೆ ಎಲ್ಲರಿಗೂ ನೋವಾಗಿದೆ” ಎಂದರು.
ಬಿಳಿಮಲೆ ಅವರು ತಮಗೆ ಸರಕಾರ ಕೊಟ್ಟಿರುವ ಗೌರವಯುತ ಅಧಿಕಾರವನ್ನು ದುರುಪಯೋಗ ಮಾಡಿ, ಜನರ ಮನಸ್ಸನ್ನು ನೋಯಿಸುವ ಕೆಲಸ ಮಾಡಿದ್ದಾರೆ. ಅವರ ಮೇಲೆ ಸುಮೋಟೊ ಕೇಸ್ ದಾಖಲಿಸಬೇಕು ಎಂದರು.
ಹಿಂದೂ ಸಂಪ್ರದಾಯಗಳಿಗೆ ಧಕ್ಕೆ ತರುವ ಕೆಲಸ ಆಗಿದೆ. ಹಲವಾರು ದೇವಸ್ಥಾನಗಳು ಯಕ್ಷಗಾನ ಮೇಳಗಳನ್ನು ನಡೆಸಿಕೊಂಡು ಬರುತ್ತಿದೆ. ಕಲಾವಿದರು ವ್ರತ ಹಿಡಿದು, ದೇವರ ಪೂಜೆ ಮಾಡಿ ರಂಗಸ್ಥಳಕ್ಕೆ ಇಳಿಯುತ್ತಾರೆ. ದೇವಸ್ಥಾನ ಮತ್ತು ಯಕ್ಷಗಾನದ ನಡುವೆ ಧಕ್ಕೆ ತರುವ ಕೆಲಸ ಇದೀಗ ಮಿತಿ ಮೀರಿದೆ. ಇದೀಗ ಡಾ.ಪುರುಷೋತ್ತಮ ಬಿಳಿಮಲೆ ಅವರು ಕಲಾವಿದರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಒಬ್ಬನೇ ಕಾಂಗ್ರೆಸ್ ನಾಯಕ ಪ್ರತಿಕ್ರಿಯೆ ನೀಡಿಲ್ಲ ಎಂದ ಮೇಲೆ ಇದು ಸರಕಾರಿ ಪ್ರಾಯೋಜಿತ ಎಂದು ಭಾವಿಸಬೇಕಾಗುತ್ತದೆ. ಸರಕಾರ ಬಿಳಿಮಲೆ ಹೇಳಿಕೆಯ ಪ್ರತಿಕ್ರಿಯೆ ನೀಡಲಿ ಎಂದು ನುಡಿದರು.



