ರೊಟ್ಟಿಗುಡ್ಡೆ: ತುಂಬೆ ಗ್ರಾಮದ ರೊಟ್ಟಿಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿಯ ಚರಂಡಿ ಅವ್ಯವಸ್ಥೆಯಿಂದ ಸಾರ್ವಜನಿಕರು ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು, ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವ್ಯವಸ್ಥೆ ನಿರ್ಮಾಣವಾಗಿದ್ದು, ಕಲುಷಿತ ನೀರು ಸರಗವಾಗಿ ಕೆಳಗೆ ಹಾದುಹೋಗುತ್ತದೆ. ಆದರೆ ಚರಂಡಿ ಇಲ್ಲದ ಕಾರಣ ಅಲ್ಲಿಯೇ ಉಳಿದು ಗಬ್ಬುನಾತ ಬೀರುತ್ತಿದೆ.
ಕೊಳಚೆ ನೀರು ಚರಂಡಿ ಸೇರದೆ ಇರುವುದರಿಂದ ಸೊಳ್ಳೆಕಾಟ ಹೆಚ್ಚಾಗಿದೆ. ರಸ್ತೆಯ ಅಕ್ಕಪಕ್ಕ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲಕಳೆಯುವಂತಾಗಿದೆ.
ಸ್ಥಳೀಯ ನಿವಾಸಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾದಚಾರಿಗಳು ನಿತ್ಯ ಸಂಚರಿಸುವ ಮಾರ್ಗದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.




