ವಿಜಯಪುರ: ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ SDPI ನಾಯಕ ಮೌಲಾನಾ ನೂರುದ್ದೀನ್ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.
ರಾಮನಗರದ ರೈಲ್ವೇ ಸ್ಪೇಷನ್ ಸರ್ಕಲ್ ಬಳಿ ನಡೆದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೌಲಾನಾ ನೂರುದ್ದೀನ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಭಯೋತ್ಪಾದಕ ಎಂದಿರುವ ಮೌಲಾನಾ ನೂರುದ್ದೀನ್, ಪ್ರತಾಪ್ ಸಿಂಹ ಬಗ್ಗೆಯೂ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಅಲ್ಲದೆ, ಟಿಪ್ಪು ಸುಲ್ತಾನ್ ಇಲ್ಲದಿದ್ದರೆ ಪ್ರತಾಪ್ ಸಿಂಹ ಬ್ರಿಟಿಷರ ನಾಯಿ ತೊಳೆಯಬೇಕಿತ್ತು ಎಂದಿದ್ದಾರೆ.
ಮೌಲಾನಾ ನೂರುದ್ದೀನ್ ಹೇಳಿಕೆಗೆ ಇತ್ತ ಶಾಸಕ ಯತ್ನಾಳ್ರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ತೀಕ್ಷ್ಣವಾಗಿ ಹೇಳಿಕೆ ನೀಡಿರುವ ಶಾಸಕರು, ಟಿಪ್ಪು ಪರ ಇರುವವರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಲಕ್ಷಾಂತರ ಹಿಂದೂಗಳ ಕೊಲೆಯಾಗಿದೆ. ಅದೆಲ್ಲ ಇತಿಹಾಸದಲ್ಲಿ ದಾಖಲಾಗಿ, ಸಾಕ್ಷಿಯಾಗಿದೆ. ಕರ್ನಾಟಕ ಹಾಗೂ ಕೇರಳ ಸೇರಿ 3,500 ದೇವಸ್ಥಾನಗಳನ್ನ ಟಿಪ್ಪು ನಾಶ ಮಾಡಿದ್ದಾನೆ. ಲಕ್ಷಾಂತರ ಕೊಡವ ಸಮಾಜದವರ ನೆರಮೇಧ ನಡೆಸಿದ್ದಾನೆ. ಹೀಗಾಗಿ ನಮಗೆ ಟಿಪ್ಪು ಆದರ್ಶವಲ್ಲ, ಆತ ಹಿಂದೂ ಧರ್ಮದ ದ್ರೋಹಿಯಾಗಿದ್ದ. ಇಸ್ಲಾಮೀಕರಣ ಮಾಡಲು ಬಯಸಿದ್ದ, ಆದರೆ ಅದು ಆಗಲಿಲ್ಲ. ಅಂತವನಿಂದ ನಾವು ಆದರ್ಶ ಕಲಿಯಬೇಕಿಲ್ಲ ಎಂದಿದ್ದಾರೆ.


