ಹಾದಿಯಾ ಪ್ರಕರಣ ಏನು? ಆಕೆ ಈಗ ಹೇಗಿದ್ದಾಳೆ?
ಕೊಟ್ಟಾಯಂ,: ಭಾರತದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕೇರಳದ ಅಖಿಲಾ ಅಶೋಕನ್ ಅಲಿಯಾಸ್ ಹಾದಿಯಾ ತಾಯಿ ಪೊನ್ನಮ್ಮ ಕೊನೆಯುಸಿರೆಳೆದಿದ್ದಾರೆ. ಮಗಳು ತನ್ನನ್ನು ಕೊನೆಗಾಲದಲ್ಲಾದರೂ ನೋಡೋಕೆ ಬಂದೇ ಬರುತ್ತಾಳೆ ಅಂತ ಪೊನ್ನಮ್ಮ ಕಾಯುತ್ತಾ ಇದ್ದಳು. ಆದರೆ ಆ ಹಿರಿ ಜೀವದ ಆಸೆ ಕೊನೆಗೂ ಈಡೇರಲೇ ಇಲ್ಲ. ತಾಯಿ ಎನ್ನುವ ಮಮಕಾರದಿಂದಲಾದರೂ ಹಾದಿಯಾ ಕೊನೆಗೂ ತಾಯಿಯನ್ನು ನೋಡಲು ಬರಲೇ ಇಲ್ಲ. ಮಗಳಿಗಾಗಿ ಕಾದು ಕಾದೇ ಹಾದಿಯಾ ತಾಯಿ ಪೊನ್ನಮ್ಮ, ಕಣ್ಣುಚ್ಚಿದ್ದಾರೆ.
ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ ಹಾದಿಯಾ ಪ್ರಕರಣದ ಅಖಿಲಾ ಅಶೋಕನ್ ಅಲಿಯಾಸ್ ಹಾದಿಯಾ ಅವರ ತಾಯಿ ಪೊನ್ನಮ್ಮ ನಿಧನರಾಗಿದ್ದಾರೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ತಮ್ಮ ಮಗಳು ಹಿಂತಿರುಗುತ್ತಾಳೆ ಎಂದು ಪೊನ್ನಮ್ಮ ಮತ್ತು ಅವರ ಪತಿ ಅಶೋಕನ್ ಕೊನೆಯ ಕ್ಷಣದವರೆಗೂ ಆಶಿಸಿದ್ದರು. ಆದರೆ ಆ ಆಸೆ ಈಡೇರದೇ ಪೊನ್ನಮ್ಮ ನಿಧನರಾಗಿದ್ದಾರೆ. ಹೃದಯಾಘಾತದಿಂದ ಪೊನ್ನಮ್ಮ ಸಾವನ್ನಪ್ಪಿದ್ದಾರೆ.
ಮಗಳು ಬಂದೇ ಬರುತ್ತಾಳೆ ಅಂತ ಪೊನ್ನಮ್ಮ ಕಾದಿದ್ದರು. ಆದರೆ ಹಾದಿಯಾ ಬರಲೇ ಇಲ್ಲ. ಕಳೆದ 2 ದಿನಗಳ ಹಿಂದೆ ಹಾದಿಯಾ ತಾಯಿ ಪೊನ್ನಮ್ಮ ಹೃದಯಾಘಾತದಿಂದ ನಿಧನರಾದರು. ಅವಳ ತಂದೆ, ಮಾಜಿ ಸೇನಾಧಿಕಾರಿ ಅಶೋಕನ್ ಈ ಬಗ್ಗೆ ಮಗಳು ಹಾದಿಯಾಗೆ ಮಾಹಿತಿ ನೀಡಿದರು. ಈ ವೇಳೆ ಹಾದಿಯಾ ತಾಯಿಯ ಅಂತಿಮ ವಿಧಿವಿಧಾನಗಳಿಗೆ ಬರುವುದಾಗಿ ಹೇಳಿದ್ದಳಂತೆ. ಹೀಗಾಗಿ ಹೆಂಡತಿಯ ಶವ ಇರಿಸಿಕೊಂಡು ಅಶೋಕನ್ ಮಧ್ಯಾಹ್ನದವರೆಗೆ ಕಾಯುತ್ತಿದ್ದರು. ಆದರೆ ಆಕೆ ಬರುವ ಬಗ್ಗೆ ಯಾವುದೇ ಸೂಚನೆ ಇರಲಿಲ್ಲ. ಹೀಗಾಗಿ ತಾವೇ ತಮ್ಮ ಹೆಂಡತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.
ಇಸ್ಲಾಂಗೆ ಮತಾಂತರಗೊಂಡಿದ್ದ ಅಖಿಲಾ
ಕೊಟ್ಟಾಯಂ ಜಿಲ್ಲೆಯ ವೈಕಂ ಮೂಲದ ಅಶೋಕನ್ ಮತ್ತು ಪೊನ್ನಮ್ಮ ಎಂಬ ಹಿಂದೂ ದಂಪತಿಗಳ ಏಕೈಕ ಪುತ್ರಿ ಅಖಿಲಾ ಅಲಿಯಾಸ್ ಹಾದಿಯಾ. ಹೋಮಿಯೋಪತಿ ವೈದ್ಯರಾಗಲು ಅಧ್ಯಯನ ಮಾಡುವಾಗ ಮುಸ್ಲಿಂ ಹುಡುಗನನ್ನು ಪ್ರೀತಿಸಿ, ಇಸ್ಲಾಂಗೆ ಮತಾಂತರಗೊಂಡಿದ್ದಳು. ನಂತರ, ಹಾದಿಯಾ ಕೊಲ್ಲಂ ಮೂಲದ ಶೆಫೀನ್ ಜಹಾನ್ ಎಂಬಾತನನ್ನು ವಿವಾಹವಾದರು. ಆದಾಗ್ಯೂ, ಹಾದಿಯಾ ಅವರ ತಂದೆ ಅಶೋಕನ್ ಅವರ ವಿವಾಹದ ವಿರುದ್ಧ ಹೈಕೋರ್ಟ್ಗೆ ಮೊರೆ ಹೋದಾಗ ಹಾದಿಯಾ ಪ್ರಕರಣವು ದೊಡ್ಡ ವಿವಾದವಾಯಿತು. ನಂತರ, ಹಾದಿಯಾ ಮದುವೆಯನ್ನು ರದ್ದುಗೊಳಿಸಲಾಯ್ತು.
ಲವ್ ಜಿಹಾದ್ ಆರೋಪ ಮಾಡಿದ್ದ ತಂದೆ
ಕೇರಳದ ಹಾದಿಯಾ ಪ್ರಕರಣವು ಭಾರತದಲ್ಲಿ ಮತಾಂತರ, ವಿವಾಹದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕುರಿತು ದೊಡ್ಡ ಚರ್ಚೆಗೆ ಕಾರಣವಾದ ಒಂದು ಪ್ರಮುಖ ನ್ಯಾಯಾಂಗ ಪ್ರಕರಣವಾಗಿದೆ. ಇದನ್ನು ಔಪಚಾರಿಕವಾಗಿ “ಶಫಿನ್ ಜಹಾನ್ ಬಿ. ಅಶೋಕನ್ ಕೆ.ಎಂ. ಮತ್ತು ಇತರರು” ಎಂದು ಕರೆಯಲಾಗುತ್ತದೆ. ಹಾದಿಯಾ 2016ರ ಡಿಸೆಂಬರ್ 19ರಂದು, ಶಫಿನ್ ಜಹಾನ್ ಎಂಬ ಮುಸ್ಲಿಂ ಯುವಕನನ್ನು ವಿವಾಹ ಮಾಡಿಕೊಂಡಳು. ತಂದೆ ಅಶೋಕನ್, ಇದನ್ನು “ಲವ್ ಜಿಹಾದ್” ಎಂದು ಆರೋಪಿಸಿ, ಕೇರಳ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು.
ವಿವಾಹ ರದ್ದು ಮಾಡಿದ್ದ ಕೇರಳ ಹೈಕೋರ್ಟ್
2017ರ ಮೇ ತಿಂಗಳಲ್ಲಿ, ಕೇರಳ ಹೈಕೋರ್ಟ್ ಹಾದಿಯಾಳ ವಿವಾಹವನ್ನು ರದ್ದುಗೊಳಿಸಿತು. ನ್ಯಾಯಾಲಯವು ಇದನ್ನು “ಬೇೂಗಸ್” (ಗುಣರಹಿತ) ವಿವಾಹ ಎಂದು ಕರೆದು, ಹಾದಿಯಾ ಮನಸ್ಸು ತಿರುಗಿಸಲ್ಪಟ್ಟಿದ್ದಳು ಮತ್ತು ಮಾನಸಿಕ ಕಿಡ್ನ್ಯಾಪ್ಗೆ ಒಳಗಾಗಿದ್ದಳು ಎಂದು ತೀರ್ಪು ನೀಡಿತು. ಇಸ್ಲಾಮಿಕ್ ಸಂಘಟನೆಗಳು ಇದರಲ್ಲಿ ಪಾತ್ರ ವಹಿಸಿವೆ ಎಂದು ಹೇಳಿ, ಹಾದಿಯಾಳನ್ನು ತಂದೆಯ ಬಳಿ ಹಸ್ತಾಂತರಿಸಿತು.
ಹಾದಿಯಾ ವಿವಾಹ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್
ಕೇರಳ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಶಫಿನ್ ಜಹಾನ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. 2017ರ ನವೆಂಬರ್ನಲ್ಲಿ, ಸುಪ್ರೀಂ ಕೋರ್ಟ್ ಹಾದಿಯಾಳ ಇಂಟರ್ನ್ಷಿಪ್ ಅನ್ನು ಮತ್ತೆ ಆರಂಭಿಸಲು ಆದೇಶಿಸಿತು ಮತ್ತು ಯಾರೊಂದಿಗಾದರೂ ಸಚ್ಚಿಕೆಯಾಗಿ ಭೇಟಿಯಾಗುವ ಸ್ವಾತಂತ್ರ್ಯ ನೀಡಿತು. 2018ರ ಮಾರ್ಚ್ 8ರಂದು, ಸುಪ್ರೀಂ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಜಯ್ ಮನಿಕರಾವ್ ಖಾನ್ವಿಲ್ಕರ್ ಮತ್ತು ಧನಂಜಯ ಯ್. ಚಂದ್ರಚೂಡ್ ಅವರ ಪೀಠವು, ಹಾದಿಯಾಳ ವಿವಾಹವನ್ನು ಮಾನ್ಯ ಮಾಡಿತು.
ಮತ್ತೊಂದು ವಿವಾಹವಾಗಿರುವ ಹಾದಿಯಾ
24 ವರ್ಷ ವಯಸ್ಸಿನ ವಯಸ್ಕಳು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿ, ಅವಳನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಬಲಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ಇತ್ತೀಚಿಗೆ ಹಾದಿಯಾ ಶಫಿನ್ ಜಹಾನ್ ಜೊತೆ ಡಿವೋರ್ಸ್ ಪಡೆದಳು. ಇತ್ತೀಚಿಗೆ ಹಾದಿಯಾ ತಿರುವನಂತಪುರದ ನೆಯ್ಯಟ್ಟಿಂಕರ ಮೂಲದ ಖಾಲಿದ್ ದಸ್ತಗಿರ್ ಎಂಬ ಮುಸ್ಲಿಂ ಯುವಕನನ್ನು ಎರಡನೇ ಬಾರಿಗೆ ವಿವಾಹವಾಗಿದ್ದಾಳೆ.



