ನವದೆಹಲಿ: ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ವಂದೇ ಮಾತರಂ ಹಾಡನ್ನು ಒಡೆದು ತುಂಡು ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಸಿಟ್ಟು ಹೊರಹಾಕಿದ್ದಾರೆ.
ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಇಂದು ಚರ್ಚೆ ಆರಂಭಿಸಿದ ಮೋದಿ, ವಂದೇ ಮಾತರಂ ವಿರುದ್ಧ ಜಿನ್ನಾ ನಡೆಸಿದ ಪ್ರತಿಭಟನೆಯನ್ನು ನೆಹರು ಬೆಂಬಲಿಸಿದರು. ಕೊನೆಗೆ ಕಾಂಗ್ರೆಸ್ ಮುಸ್ಲಿಂ ಲೀಗ್ಗೆ ತಲೆಬಾಗಿ ತುಂಡು ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ವಂದೇ ಮಾತರಂ ವಿರುದ್ಧ ಮುಸ್ಲಿಂ ಲೀಗ್ ನೆಹರು ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತು. ಮೊಹಮ್ಮದ್ ಅಲಿ ಜಿನ್ನಾ ಅದರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗಿನ ಕಾಂಗ್ರೆಸ್ ಮುಖ್ಯಸ್ಥ ಜವಾಹರಲಾಲ್ ನೆಹರು ಜಿನ್ನಾ ಹೇಳಿಕೆಗಳನ್ನು ಖಂಡಿಸಲು ಹೋಗಲಿಲ್ಲ. ವಂದೇ ಮಾತರಂ ಬಗ್ಗೆ ತಮ್ಮ ಮತ್ತು ಪಕ್ಷದ ನಿಷ್ಠೆಯನ್ನು ವ್ಯಕ್ತಪಡಿಸುವ ಬದಲು ಜಿನ್ನಾ ವಿರೋಧಿಸಿದ ಕೇವಲ ಐದು ದಿನಗಳ ನಂತರ ವಂದೇ ಮಾತರಂ ಪರಿಶೀಲಿಸಲು ಆರಂಭಿಸಿದರು.


