Flash News

RSS ಪಥಸಂಚಲನದಲ್ಲಿ ಒಂದೇ ಒಂದು ಕಡೆಯೂ ಗಲಾಟೆ, ದೊಂಬಿ ಆಗಿಲ್ಲವೆಂದ ಕಾಂಗ್ರೆಸ್ ಸರ್ಕಾರ!

ಬೆಳಗಾವಿ: ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಆರ್​ಎಸ್​ಎಸ್ ಕಾರ್ಯಕ್ರಮ ಹಾಗೂ ಪಥಸಂಚಲನಕ್ಕೆ ಅವಕಾಶ ನೀಡಲೇಬಾರದು. ಆರ್​ಎಸ್​ಎಸ್ ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲೂ, ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಚಿತ್ತಾಪುರದಲ್ಲಿ ಆರ್​ಎಸ್​ಎಸ್ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರ ಕೋರ್ಟ್​ ಮೆಟ್ಟಿಲೇರಿ, ಕೊನೆಗೂ ಪಥಸಂಚಲನ ನಡೆದಿದೆ. ಅಂಥದ್ದರಲ್ಲಿ, ಈ ವರ್ಷ ಕರ್ನಾಟಕದಾದ್ಯಂತ 518 ಕಡೆ ಆರ್​ಎಸ್​ಎಸ್ ಕಾರ್ಯಕ್ರಮ, ಪಥಸಂಚಲ ನಡೆದಿದೆ. ಎಲ್ಲಿಯೂ ಗಲಾಟೆ, ದೊಂಬಿ ಆಗಿಲ್ಲ ಎಂದು ಕಾಂಗ್ರೆಸ್ ಸರ್ಕಾರವೇ ಹೇಳಿದೆ!

ಆರ್​ಎಸ್​ಎಸ್​ ಕಾರ್ಯಕ್ರಮಗಳ ಬಗ್ಗೆ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ, ಕರ್ನಾಟಕದಾದ್ಯಂತ ಒಟ್ಟು 518 ಕಡೆಗಳಲ್ಲಿ ಆರ್​ಎಸ್​ಎಸ್ ಪಥ ಸಂಚಲನ ನಡೆದಿದೆ. ಅಂದಾಜು 2 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಯಾವುದೇ ಗಲಾಟೆ, ದೊಂಬಿ ಅಥವಾ ಕೋಮು ಗಲಭೆಗಳು ನಡೆದಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಚಿತ್ತಾಪುರದಲ್ಲಿ ಆರ್​​ಎಸ್​​ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುವಾಗ ಕಲಬುರಗಿ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆಯ ಕಾರಣ ನೀಡಿತ್ತು. ಆದರೆ, ಇಡೀ ರಾಜ್ಯದಲ್ಲೇ ಆರ್​​ಎಸ್​​ಎಸ್ ಕಾರ್ಯಕ್ರಮಗಳಿಂದಾಗಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಿಲ್ಲ ಎಂದು ಖುದ್ದು ಸರ್ಕಾರವೇ ಈಗ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿಕೊಂಡಿದೆ.

ವಿಶೇಷವೆಂದರೆ, ಗೃಹ ಸಚಿವರ ಉತ್ತರ ಪ್ರಕಾರ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲೇ ಎರಡನೇ ಅತಿ ಹೆಚ್ಚು (51) ಪಥ ಸಂಚಲನಗಳು ನಡೆದಿವೆ. 6ರಿಂದ 7 ಸಾವಿರಸ್ವಯಂ ಸೇವಕರು ಪಾಲ್ಗೊಂಡಿದ್ದಾರೆ. ಅತಿ ಹೆಚ್ಚು (97) ಪಥಸಂಚಲನಗಳು ಬೆಂಗಳೂರು ನಗರದಲ್ಲಿ ನಡೆದಿವೆ. 27 ರಿಂದ 30 ಸಾವಿರ ಸ್ವಯಂ ಸೇವಕರು ಪಾಲ್ಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 45 ಪಥಸಂಚಲನಗಳು, ಬಾಗಲಕೋಟೆ ಜಿಲ್ಲೆಯಲ್ಲಿ 33 ಪಥಸಂಚಲನಗಳು, ಬೀದರ್ ಜಿಲ್ಲೆಯಲ್ಲಿ 41 ಪಥಸಂಚಲನಗಳು, ಶಿವಮೊಗ್ಗ ಜಿಲ್ಲೆಯಲ್ಲಿ 19 ಪಥಸಂಚಲನಗಳು, ವಿಜಯಪುರ ಜಿಲ್ಲೆಯಲ್ಲಿ 18 ಪಥಸಂಚಲನಗಳು ನಡೆದಿವೆ.