Flash News

ಹೈವೇಗಳಲ್ಲಿ ರಾತ್ರಿ ವಾಹನ ಓಡಿಸೋವಾಗ ಎಚ್ಚರವಾಗಿರಿ: ಭಯ ಹುಟ್ಟಿಸುತ್ತೆ ಸರ್ಕಾರಿ ಅಂಕಿ-ಅಂಶಗಳು

►ಹೆದ್ದಾರಿ ದರೋಡೆ ನಿಯಂತ್ರಿಸುವುದೇ ದೊಡ್ಡ ಸವಾಲು

ಬೆಂಗಳೂರು: ಹೆದ್ದಾರಿಯಲ್ಲಿ ರಾತ್ರಿ ಪ್ರಯಾಣ ಬಹಳ ಸುರಕ್ಷಿತ. ಘನ ವಾಹನಗಳು ಬಿಟ್ಟರೆ ಯಾವುದೇ ಟ್ರಾಫಿಕ್‌ ಕಿರಿಕಿರಿ ಇಲ್ಲದೇ ಸುಲಭವಾಗಿ ಗಮ್ಯ ಸ್ಥಳಗಳನ್ನು ತಲುಪಬಹುದು ಎನ್ನುವುದು ಹಲವರ ಲೆಕ್ಕಾಚಾರ. ಆದರೆ ರಾಜ್ಯದಲ್ಲಿ ರಾತ್ರಿ ಪ್ರಯಾಣ ಅಪಾಯಕಾರಿ ಎಂಬ ಸ್ಫೋಟಕ ವಿಚಾರ ಸರ್ಕಾರಿ ಅಂಕಿ ಸಂಖ್ಯೆಯಿಂದ ಬಹಿರಂಗವಾಗಿದೆ.

ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೂ ಸಂಖ್ಯೆ ಮಾತ್ರ ಆತಂಕ ಹುಟ್ಟಿಸಿದೆ. ಕಳೆದ 3 ವರ್ಷಗಳಲ್ಲಿ 403 ದರೋಡೆ ಮತ್ತು ಸುಲಿಗೆ ಪ್ರಕರಣಗಳು ವರದಿಯಾಗಿವೆ.

ರಾಷ್ಟ್ರೀಯ ಹೆದ್ದಾರಿ
2023 – 81 ಸುಲಿಗೆ ಹಾಗೂ 23 ದರೋಡೆ
2024 – 66 ಸುಲಿಗೆ ಹಾಗೂ 16 ದರೋಡೆ
2025 – ನವೆಂಬರ್ 15 ವರೆಗೆ 51 ಸುಲಿಗೆ, 14 ದರೋಡೆ

ರಾಜ್ಯ ಹೆದ್ದಾರಿಗಳು
2023 – 39 ಸುಲಿಗೆ, 17 ದರೋಡೆ
2024 – 35 ಸುಲಿಗೆ, 22 ದರೋಡೆ
2025 – 20 ಸುಲಿಗೆ, 19 ದರೋಡೆ

ಹೆದ್ದಾರಿ ದರೋಡೆ ಪ್ರಕರಣಗಳನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಚೆಕ್ ಪೋಸ್ಟ್‌ಗಳಿವೆ. ಸಂಶಯಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ

ರಾತ್ರಿ ಗಸ್ತು ಕರ್ತವ್ಯಕ್ಕೆ ಪ್ರತಿ ಠಾಣೆಗಳಿಗೆ ಸರ್ಕಾರಿ ದ್ವಿಚಕ್ರ ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೇ ವಾಹನಗಳಲ್ಲಿ ಸೈರನ್ ಹಾಗೂ ರೆಡ್ ಲೈಟ್‌ಗಳನ್ನು ಹಚ್ಚಿಕೊಂಡು ರಾತ್ರಿ ಗಸ್ತಿಗೆ ಸೂಚಿಸಲಾಗಿದೆ. ಜೊತೆಗೆ ದಿನದ 24 ಗಂಟೆಗಳಲ್ಲಿ ಮೂರು ಪಾಳಿ 112 ಗಸ್ತು ನಿಯೋಜಿಸಲಾಗಿದೆ.

ಈ ಹಿಂದೆ ದರೋಡೆ, ಸುಲಿಗೆ ಹಾಗೂ ಇತರೆ ಸ್ವತ್ತಿನ ಅಪರಾಧವೆಸಗಿದ ಆರೋಪಿತರ ಮೇಲೆ ಎಂಒಬಿ ಕಾರ್ಡ್‌ ತೆಗೆಯಲಾಗಿದೆ. ಅವರನ್ನು ಅನಿರೀಕ್ಷಿತವಾಗಿ ಪರಿಶೀಲಿಸಲಾಗುತ್ತದೆ ಹಾಗೂ ಅವರ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ. ಅಪರಾಧಗಳನ್ನು ತಡೆಗಟ್ಟಲು ಬಾರ್ಡರ್ ಕ್ರೈಂ ಸಭೆ ಮಾಡಲಾಗುತ್ತಿದೆ.

ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳ ಕುರಿತು ಮಾಹಿತಿಯನ್ನು ನೆರೆ ರಾಜ್ಯ/ಜಿಲ್ಲೆಗಳು/ಪೊಲೀಸ್ ಠಾಣೆಗಳಿಗೆ ಪರಸ್ಪರ ಹಂಚಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬರುವಂತಹ ಟೋಲ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡಲಾಗುತ್ತಿದೆ. ರಾತ್ರಿ ಬೀಟ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಆಯುಧ ಮತ್ತು ಮದ್ದು ಗುಂಡುಗಳನ್ನು ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ.