ಕಾಸರಗೋಡು : ಬಿಹಾರ ನಂತರ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಕೇರಳದಲ್ಲಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಎಸ್‌ಐಆರ್ ಕಾರ್ಯವಿಧಾನಗಳು ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. ಇಲ್ಲಿವರೆಗೆ ಮತದಾರರ ಪಟ್ಟಿಯಿಂದ 25 ಲಕ್ಷಕ್ಕೂ ಹೆಚ್ಚು ಮತದಾರರು ಹೊರಗುಳಿದಿದ್ದು, ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸೇರಿದಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪ್ರಸ್ತುತ ಕೇರಳದಲ್ಲಿ ಶೇ.99.96 ಎಸ್‌ಐಆರ್ ಅರ್ಜಿ ನಮೂನೆಗಳನ್ನು ಹಿಂತಿರುಗಿಸಲಾಗಿದೆ ಮತ್ತು ಶೇ.99.77 ಡಿಜಿಟಲೀಕರಣಗೊಳಿಸಲಾಗಿದೆ. ಇದರ ಪ್ರಕಾರ ಸುಮಾರು 25 ಲಕ್ಷಕ್ಕೂ ಹೆಚ್ಚು ಮತದಾರರು ಹೊರಗುಳಿದಿದ್ದಾರೆ. ಇವರಲ್ಲಿ ಮರಣ ಹೊಂದಿದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಬೇರೆಡೆ ಹೆಸರು ಸೇರಿಸಿಕೊಂಡವರು ಮತ್ತು ಇತರ ಕಾರಣಗಳಿಂದ ಪಟ್ಟಿಗೆ ಸೇರ್ಪಡೆಗೊಳ್ಳದವರಿದ್ದಾರೆ.
ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಹೊರಗುಳಿದವರಲ್ಲಿ ಯಾರಾದರೂ ಮತ್ತೆ ಪಟ್ಟಿಗೆ ಸೇರಲು ಇಚ್ಛಿಸಿದರೆ ಅವಕಾಶ ನೀಡಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ರತನ್ ಕೇಳ್ಕರ್ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಅಂಕಿಅಂಶಗಳು ಸ್ಪಷ್ಟವಾಗಿಲ್ಲಮತ್ತು ಎಸ್‌ಐಆರ್ ಪ್ರಕ್ರಿಯೆಗಳ ಅವಧಿಯನ್ನು ಮತ್ತೆ ವಿಸ್ತರಿಸಬೇಕೆಂದು ಒತ್ತಾಯಿಸಿವೆ.
ಡಿ.15ರ ವೇಳೆಗೆ ಮತದಾರರ ಪಟ್ಟಿಯಲ್ಲಿ6,44,547 ಮಂದಿಯನ್ನು ಮೃತರೆಂದು ಗುರುತಿಸಲಾಗಿದೆ. ಪತ್ತೆಹಚ್ಚಲಾಗದವರು- 7,11,958, ಶಾಶ್ವತವಾಗಿ ಸ್ಥಳಾಂತರಗೊಂಡವರು- 8,19,346, ಒಂದಕ್ಕಿಂತ ಹೆಚ್ಚು ಬಾರಿ ಪಟ್ಟಿಯಲ್ಲಿಸೇರಿಸಲ್ಪಟ್ಟವರು- 1,31,530 ಮತ್ತು ಇತರರು- 1,93,631 ಮಂದಿ. ಒಟ್ಟು 25,01,012 ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ.
ರಾಜಧಾನಿಯಲ್ಲೇ ಅತೀ ಹೆಚ್ಚು ಮಂದಿ ಹೊರಗೆ:
ರಾಜ್ಯ ರಾಜಧಾನಿ ತಿರುವನಂತಪುರದಲ್ಲೇ ಅತೀ ಹೆಚ್ಚು ಮಂದಿ ಕರಡು ಪಟ್ಟಿಯಿಂದ ಹೊರಗುಳಿದವರು. ಇಲ್ಲಿ4,36,857 ಮಂದಿ ಪಟ್ಟಿಯಿಂದ ಹೊರಗಿದ್ದಾರೆ. ಕಾಸರಗೋಡು- 63,114, ವಯನಾಡ್- 37,422, ಕೊಲ್ಲಂ-1,68,018, ಮಲಪ್ಪುರಂ- 1,79,673, ಪಾಲಕ್ಕಾಡ್- 2,00,070, ತ್ರಿಶೂರ್- 2,56,842, ಎರ್ನಾಕುಳಂ- 3,34,962, ಇಡುಕ್ಕಿ- 1,28,333, ಕೋಯಿಕ್ಕೋಡ್- 1,94,588, ಪತ್ತನಂತಿಟ್ಟ- 1,00,948, ಆಲಪ್ಪುಳ- 1,44,243, ಕೊಟ್ಟಾಯಂ- 1,66,010, ಕಣ್ಣೂರು- 89,932ಮಂದಿ ಮತದಾರರು ಹೊರಗುಳಿದಿದ್ದಾರೆ.
ಕರಡು ಪಟ್ಟಿಯಲ್ಲಿ ಒಂದು ವೇಳೆ ಹೆಸರು ಇಲ್ಲದಿದ್ದರೆ ಅಂಥವರು ದಾಖಲೆಗಳನ್ನು ಹಾಜರುಪಡಿಸಿ ಪಟ್ಟಿಯಲ್ಲಿ ಹೆಸರು ಸೇರಿಸಬೇಕಾಗುತ್ತದೆ. ಎಸ್‌ಐಆರ್ ಅವಧಿ ಡಿ.18 ರ ವರೆಗೆ ಇದೆ. ಕರಡು ಮತದಾರರ ಪಟ್ಟಿಯನ್ನು ಡಿ.23 ರಂದು ಪ್ರಕಟಿಸಲಾಗುವುದು. ಜ.22ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಫೆ.14ರ ವರೆಗೆ ವಿಚಾರಣೆ ಮತ್ತು ಪರಿಶೀಲನೆ ನಡೆಸಿದ ನಂತರ ಅಂತಿಮ ಮತದಾರರ ಪಟ್ಟಿಯನ್ನು ಫೆ.21ರಂದು ಪ್ರಕಟಿಸಲಾಗುತ್ತದೆ.


