ಲಕ್ನೋ: ತನ್ನೊಂದಿಗೆ ಜಗಳ ಮಾಡಿಕೊಂಡು ಬುರ್ಖಾ ಧರಿಸದೆ ತವರು ಮನೆಗೆ ತೆರಳಿದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ, ಅವರು ವಾಪಸ್ ಬಂದ ಬಳಿಕ ಮೂವರನ್ನೂ ಹತ್ಯೆ ಮಾಡಿ ಸೆಪ್ಟಿಕ್ ಟ್ಯಾಂಕ್ನಲ್ಲಿ ಹೂತಿಟ್ಟ ಪ್ರಕರಣ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಕಂಡ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಗಢಿಡಾಲ್ಟ್ ಗ್ರಾಮದ ನಿವಾಸಿ ಫಾರೂಖ್ ಹತ್ಯೆ ಕೇಸಲ್ಲಿ ಬಂಧಿತನಾದವ. ಸೊಸೆ ಮತ್ತು ಮೊಮ್ಮಕ್ಕಳು ಕಾಣೆಯಾದ ಬಗ್ಗೆ ಮಾವ (ಆರೋಪಿಯ ತಂದೆ) ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ತ್ರಿವಳಿ ಕೊಲೆ ಕೇಸ್ ಬಯಲಾಗಿದೆ.
ಪ್ರಕರಣದ ಪೂರ್ಣ ವಿವರ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಫಾರೂಖ್ ಕುಟುಂಬದೊಂದಿಗೆ ದೂರವಾಗಿ ಪ್ರತ್ಯೇಕವಾಗಿ ಪತ್ನಿ ಮತ್ತು ಮಕ್ಕಳ ಜೊತೆ ವಾಸವಿದ್ದಾನೆ. ಪತ್ನಿಯ ಜೊತೆ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ ತಾಹಿರಾ (32) ಮತ್ತು ಇಬ್ಬರು ಹೆಣ್ಣುಮಕ್ಕಳಾದ ಅಫ್ರೀನ್ (12) ಮತ್ತು ಸರೀನ್ (5) ಅವರನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದರು.
ಈ ವೇಳೆ ಅವರು ಬುರ್ಖಾ ಧರಿಸಿ ಹೋಗಿರಲಿಲ್ಲ ಎಂಬುದು ಹಂತಕನ ಆರೋಪ. ಇದು ಆತನನ್ನು ತೀವ್ರವಾಗಿ ಅಸಮಾಧಾನಗೊಳಿಸಿದೆ. ಅಂದಿನಿಂದ ಅವರನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ಫಾರೂಖ್ ಬಾಯಿಬಿಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಚಹಾ ಮಾಡಲು ಕರೆದೊಯ್ದು ಗುಂಡು ಹಾರಿಸಿದ: ತಿಂಗಳ ನಂತರ ಪತ್ನಿ ಮತ್ತು ಮಕ್ಕಳು ವಾಪಸ್ ಗಂಡನ ಮನೆಗೆ ಹಿಂದಿರುಗಿದ್ದರು. ಕೊಲೆಗೆ ಸಂಚು ಹಾಕಿ ಕಾದಿದ್ದ ಫಾರೂಖ್ ಡಿಸೆಂಬರ್ 10ರ ರಾತ್ರಿ ಯೋಜಿಸಿದಂತೆ ತನ್ನ ಐವರು ಮಕ್ಕಳಲ್ಲಿ ಮೂವರನ್ನು ತಂದೆಯ ಮನೆಗೆ ಕಳುಹಿಸಿದ್ದ. ತನ್ನ ಮನೆಯಲ್ಲಿ ಇಬ್ಬರು ಪುತ್ರಿಯರು ಮತ್ತು ಪತ್ನಿ ಮಾತ್ರ ಇದ್ದರು. ಮಲಗಿದ್ದಾಗ ರಾತ್ರಿ ಚಹಾ ಮಾಡುವ ನೆಪದಲ್ಲಿ ಹೆಂಡತಿಯನ್ನು ಎಬ್ಬಿಸಿ ಮನೆಯೊಳಕ್ಕೆ ಕರೆದೊಯ್ದು ತನ್ನಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.
ಗುಂಡಿನ ಶಬ್ದ ಕೇಳಿ ಹಿರಿಯ ಮಗಳು ಒಳಗೆ ಬಂದಾಗ, ಆಕೆಗೂ ಗುಂಡು ಹಾರಿಸಿದ್ದಾನೆ. ನಂತರ ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಮೂವರನ್ನೂ ಹತ್ಯೆ ಮಾಡಿದ ಬಳಿಕ, ಶೌಚಾಲಯ ನಿರ್ಮಾಣಕ್ಕಾಗಿ ಅಗೆದಿದ್ದ ಸೆಪ್ಟಿಕ್ ಟ್ಯಾಂಕ್ ಗುಂಡಿಯಲ್ಲಿ ಶವಗಳನ್ನು ಹೂತು ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.



