Flash News

Uppinangady: ಜೇನು ಕೃಷಿ ಕಲಿಸುವೆನೆಂದು ಬಾಲಕಿ ಮೇಲೆ ಅತ್ಯಾಚಾರ

ಉಪ್ಪಿನಂಗಡಿ: ಬೆಳಗಾವಿ ಮೂಲದ ಕೂಲಿ ಕಾರ್ಮಿಕ ಕುಟುಂಬವೊಂದರ 13ರ ಹರೆಯದ ಬಾಲಕಿಯನ್ನು ಜೇನು ಕೃಷಿ ಕಲಿಸಿಕೊಡುವೆನೆಂದು ತನ್ನ ಮನೆಯಲ್ಲಿರಿಸಿ ನಿರಂತರ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ 34ನೇ ನೆಕ್ಕಿಲಾಡಿಯ ಬೇರಿಕೆ ನಿವಾಸಿ ಅಬ್ದುಲ್‌ ಗಫ‌ೂರ್‌ (50) ಎಂಬಾತನನ್ನು ಪೋಕ್ಸೋ ಕಾಯಿದೆಯಡಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಕೂಲಿ ಕೆಲಸಕ್ಕೆಂದು ಬಂದು ಪರಿಸರದಲ್ಲಿ ವಾಸವಾಗಿದ್ದ ಕುಟುಂಬವೊಂದರ ಬಾಲಕಿಗೆ ಜೇನು ಕೃಷಿ ಕಲಿಸಿಕೊಡುವ ಭರವಸೆ ನೀಡಿ ಆರೋಪಿಯು ತನ್ನ ಮನೆಯಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದ. ಬಾಲಕಿಯ ಹೆತ್ತವರು ಆರೋಪಿಯನ್ನು ನಂಬಿ ಮಗಳನ್ನು ಆತನ ಮನೆಯಲ್ಲಿಯೇ ಬಿಟ್ಟು ಊರಿಗೆ ಹೋಗಿದ್ದರು. ಡಿ. 19ರಂದು ಹೆತ್ತವರು ಊರಿಂದ ಮರಳಿದಾಗ ಬಾಲಕಿಯು ತನ್ನ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದನ್ನು ತಿಳಿಸಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.

ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅತ್ಯಾಚಾರ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಿಳೆ ಮೇಲೆಯೇ ಆರೋಪಿ ದೂರು
ಊರಿನಿಂದ ಮರಳಿದ ಮಹಿಳೆಯು “ನಂಬಿಕಸ್ಥ’ ವ್ಯಕ್ತಿಯ ಮನೆಯಲ್ಲಿ ಆಶ್ರಯ ಪಡೆದಿದ್ದ ಮಗಳ ಯೋಗಕ್ಷೇಮವನ್ನು ವಿಚಾರಿಸಲೆಂದು ಹೋದಾಗ ಮಗಳು ಅಳುತ್ತಾ ತನ್ನ ಮೇಲೆ ನಿರಂತರ ಅತ್ಯಾಚಾರವಾಗಿರುವುದನ್ನು ತಿಳಿಸಿದಳು. ಆಕ್ರೋಶಗೊಂಡ ತಾಯಿ ಮತ್ತು ಬಾಲಕಿಯ ಸೋದರತ್ತೆ ಆರೋಪಿಯ ಜತೆ ವಾಗ್ವಾದಕ್ಕಿಳಿದರು. ಆಗ ಆರೋಪಿ ಗಫೂರ್‌ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಪೊಲೀಸರನ್ನು ಕರೆಸಿ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದನು. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ..