Flash News

ಡಾ. ಫಾರೂಕ್ ಚಂದ್ರನಗರ್ ಎಂಬ ಸೇವಾಲೋಕದ ಚಂದ್ರ ರಾಜಕೀಯದಲ್ಲಿ ಬೆಳಗಲಿ

ಚಿತ್ರದಲ್ಲಿ ಕಾಣುವ ವ್ಯಕ್ತಿಯ ಹೆಸರು ಫಾರೂಕ್ ಚಂದ್ರನಗರ್. ಅತ್ಯಂತ ಚಿಕ್ಕ ಪ್ರಾಯದಲ್ಲಿ ರಾಜಕೀಯ ಪ್ರವೇಶಿಸಿ, ಬರೀ ಮುಸ್ಲಿಮರು ಮಾತ್ರವಲ್ಲ ಇತರ ಎಲ್ಲ ಸಮುದಾಯಗಳ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರರಾದವರು. ಎಲ್ಲ ಸಮುದಾಯಗಳು ಇವರ ನಿರಂತರವಾದ ಸೇವಾ ಚಟುವಟಿಕೆಗಳು ಮತ್ತು ಸಾಮಾಜಿಕ ತುಡಿತವನ್ನು ಪರಿಗಣಿಸಿ ಸನ್ಮಾನಿಸಿದ ಹಿರಿಮೆಯನ್ನು ಇವರು ಹೊಂದಿದ್ದಾರೆ. ಇವರು ಗಳಿಸಿದ ಪ್ರಶಸ್ತಿ ಮತ್ತು ಇವರಿಗಾದ ಸನ್ಮಾನಗಳ ಲೆಕ್ಕವೇ ಇಲ್ಲ. ಅದು ಹಿಂದುಗಳಲ್ಲಾಗಲಿ, ಮುಸಲ್ಮಾನರಲ್ಲಾಗಲಿ ಅಥವಾ ಕ್ರೈಸ್ತರಾಗಲಿ, ಈ ಎಲ್ಲ ಸಮುದಾಯಗಳಿಗೆ ಇವರಷ್ಟು ಅಚ್ಚುಮೆಚ್ಚಿನವರಾದ ವ್ಯಕ್ತಿತ್ವಗಳೂ ಅಪರೂಪ. ಕಳೆದ ಸರಿಸುಮಾರು 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ರಾಜಕೀಯವನ್ನು ಮಾಡುತ್ತಿದ್ದರೂ, ಇವರ ಸಾಮರ್ಥ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ಪಕ್ಷದಲ್ಲಿ ಯಾವುದೇ ಹೇಳಿಕೊಳ್ಳುವಂತಹ ಹುದ್ದೆ-ಅವಕಾಶಗಳು ಸಿಗದಿರುವುದು ಬೇಸರದ ಸಂಗತಿ. ಹೀಗಿದ್ದರೂ, ತಮ್ಮ ವ್ಯಕ್ತಿತ್ವ ಹಾಗೂ ಸಾಮಾಜಿಕ ಸ್ಪಂದನೆಯ ಮೂಲಕ ಬರೀ ಕಾಪು ತಾಲೂಕಿನಲ್ಲಿ ಮಾತ್ರವಲ್ಲ ಇಡೀ ಕರಾವಳಿ ಜಿಲ್ಲೆಗಳಲ್ಲಿ ವರ್ಚಸ್ವಿ ನಾಯಕರಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರ.

ಪ್ರತಿಯೊಂದು ರಾಜಕೀಯ ಪಕ್ಷ ಬಯಸುವ ಪರಿಣಾಮಕಾರಿ ನಾಯಕತ್ವ ಗುಣ ಇವರಲ್ಲಿದೆ. ವ್ಯಕ್ತಿತ್ವದಲ್ಲಿ ಅಕ್ಷರಶಃ ಅಜಾತಶತ್ರು. ಯಾವುದೇ ಜವಾಬ್ದಾರಿ ವಹಿಸಿಕೊಂಡರೂ ಅದರಲ್ಲಿ ಊಹೆಗಿಂತ ಹೆಚ್ಚು ತೊಡಗಿಸಿಕೊಂಡು ಎಲ್ಲರ ಹುಬ್ಬೇರಿಸುವಂತೆ ಕೆಲಸ ಮಾಡುವ ಸಾಮರ್ಥ್ಯ ಇರುವವರು. ಜಾತಿ ಧರ್ಮ ಪಂಥಗಳ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಫಲಿತಾಂಶ ನೀಡಬಲ್ಲ ಚಾಕಚಕ್ಯತೆ ಇರುವ ಅಪರೂಪದಲ್ಲೇ ಅಪರೂಪದವರು ಈ ಫಾರೂಕ್. ಕಳೆದ ಎರಡು ದಶಕಗಳ ನಿರಂತರವಾದ ಇವರ ಸಾಮಾಜಿಕ ತುಡಿತ, ಪ್ರಭುದ್ಧ ರಾಜಕೀಯ ಮತ್ತು ದುರ್ಬಲರ ಸೇವೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಸೇರಿದಂತೆ ನೂರಾರು ದೇಶ -ವಿದೇಶದ ಪ್ರಶಸ್ತಿಗಳು ಇವರ ಮುಡಿಗೇರಿವೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷದಲ್ಲಿ ಇವರಿಗೆ ಜವಾಬ್ದಾರಿಯುತವಾದ ಹುದ್ದೆಯನ್ನು ನೀಡಿದರೆ, ಕಾಪು ಕ್ಷೇತ್ರದ ಕಾಂಗ್ರೆಸ್ ಮಾತ್ರವಲ್ಲ ಉಡುಪಿ ಜಿಲ್ಲಾ ಕಾಂಗ್ರೆಸ್ ಕೂಡ ಹಿಂದೆಂದಿಗಿಂತ ಹೆಚ್ಚು ಬಲಿಷ್ಠವಾಗಿ ಕಾಣಿಸಿಕೊಳ್ಳುವುದು ಶತ:ಸಿದ್ಧ. ತಮ್ಮ ಆಕರ್ಷಕ ವ್ಯಕ್ತಿತ್ವದ ಮೂಲಕ ಎಲ್ಲರನ್ನೂ ಸೆಳೆಯುವ ತಾಕತ್ತು ಹೊಂದಿರುವ ಫಾರೂಕ್ ರವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಥವಾ ಪಕ್ಷವು ದೊಡ್ಡದಾದ ಜವಾಬ್ದಾರಿಯನ್ನು ನೀಡಲಿ ಎಂದು ಹಾರೈಸುವೆ. ಹೀಗಾದರೆ, ಕಾಂಗ್ರೆಸ್ ಪಕ್ಷವು ಮತ್ತಷ್ಟು ಶಕ್ತಿಶಾಲಿಯಾಗುವುದು ನಿಶ್ಚಿತ.

✍🏾 ಶ್ರೀಧರ ಕೋಟ್ಯಾನ್