ಉಡುಪಿ: ಯುನಿಟಿ ಸೌಹಾರ್ದ ಸಹಕಾರಿ ಸಂಘದ 9ನೇ ವರ್ಷದ ವಾರ್ಷಿಕ ಮಹಾಸಭೆಯು ಸೆ.20ರಂದು ಸಂಸ್ಥೆಯ ಆವರಣದಲ್ಲಿ ಅಧ್ಯಕ್ಷ ಜಮಾಲ್ ಹೈದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಸಂಘವು ಪ್ರಸ್ತುತ ಸುಮಾರು ₹14.5 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ₹20.71 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ಪ್ರಧಾನ ವ್ಯವಸ್ಥಾಪಕ ನವಾಝ್ ಜೆಕೆ ಸ್ವಾಗತಿಸಿದರು. ನಿರ್ದೇಶಕ ಇಲ್ಯಾಸ್ ಸಾಸ್ತಾನ ಅವರು ಸಂಸ್ಥೆಯು ನಡೆದುಬಂದ ಹಾದಿ ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಸಿಇಒ ಫಝೀಲ್ ಅಹಮ್ಮದ್ ಅವರು ವಾರ್ಷಿಕ ವರದಿ, ಮುಂದಿನ ವರ್ಷದ ಕ್ರಿಯಾಯೋಜನೆ ಹಾಗೂ ಸಂಸ್ಥೆಯ ಗುರಿಗಳನ್ನು ಸಭೆಯಲ್ಲಿ ಮಂಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ನಾಯರಕೆರೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮಾತನಾಡಿದ ಅವರು, ಸಾಮಾನ್ಯ ಜನರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕರು ಸಹಕಾರಿ ಸಂಸ್ಥೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಯುನಿಟಿ ಸೌಹಾರ್ದ ಸಹಕಾರಿ ಸಂಘವು ಉಡುಪಿ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ 14 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ. ಪರ್ವೇಜ್ ಮಲ್ಪೆ ಹಾಗೂ ಶೇಖ್ ಸಲೀಂ ಸಾಹೇಬ್ ಬ್ರಹ್ಮಾವರ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಮನೆಗಾರ್ ಮೊಹಮ್ಮದ್ ಮನ್ಸೂರ್ ಶಿರೂರು, ನಿರ್ದೇಶಕರಾದ ಹಬಿಬುಲ್ಲಾ ಶೇಖ್ ಜಿ. ಶಿರೂರು, ಸೈಯದ್ ಅಝೀಂ ಬ್ರಹ್ಮಾವರ, ಮೊಹಮ್ಮದ್ ಸಯೀದ್ ಉಡುಪಿ ಹಾಗೂ ಮೊಹಮ್ಮದ್ ರಫೀಕ್ ಸಾಹೇಬ್ ಬ್ರಹ್ಮಾವರ ಉಪಸ್ಥಿತರಿದ್ದರು.
ಕುಂದಾಪುರ ಶಾಖೆಯ ವ್ಯವಸ್ಥಾಪಕ ನವಾಝ್ ಶೇಖ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


