ಐ.ಎಂ.ಕೆ. ಕಿನ್ನಿಗೋಳಿ
ಕಿನ್ನಿಗೋಳಿ ಹಾಗೂ ಬಜಪೆ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎರಡು ಕಡೆಗಳಲ್ಲೂ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ವಾರ್ಡ್‌ವೊಂದರ ಕುರಿತಂತೆ ಬಿಜೆಪಿ ಭಾರೀ ಪೋಸ್ಟ್‌ಗಳನ್ನು ಹಾಕುತ್ತಿದ್ದು, ಶೇಕಡಾ 70-80 ರಷ್ಟು ಕ್ರೈಸ್ತ ಮತದಾರರಿರುವ ವಾರ್ಡ್‌ನಲ್ಲಿ ಬಿಜೆಪಿ ಜಯಭೇರಿ ಗಳಿಸಿದ್ದಾಗಿ ಬಿಂಬಿಸುತ್ತಿದೆ. ಫಲಿತಾಂಶದ ದಿನದವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಅನ್ನೋ ಲೆಕ್ಕಚಾರ ಕೊನೆಯ ಕ್ಷಣದಲ್ಲಿ ಬದಲಾಗಿದೆ. ಅಂತಿಮವಾಗಿ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಇರುವ ಸಮಯದಲ್ಲಿ ಒಂದು ಬಾರಿಯೂ ಸೋಲು ಅನುಭವಿಸದ, ಹಿರಿಯ ಕಾಂಗ್ರೆಸ್ಸಿಗ ಹಾಜಿ ಟಿ.ಎಚ್. ಮಯ್ಯದ್ದಿ ಅವರು ಭಾರತೀಯ ಜನತಾ ಪಕ್ಷದ ಪ್ರಣೀಕ್ ಎಂಬ ಯುವಕನ ಮುಂದೆ 12 ವೋಟ್‌ಗಳ ಅಂತರದಿಂದ ಸೋಲು ಕಂಡಿದ್ದಾರೆ. ಆದರೆ, ಬಿಜೆಪಿ ಬಿಂಬಿಸುವಂತೆ ಇಡೀ ಕ್ರೈಸ್ತ ಸಮುದಾಯ ಬಿಜೆಪಿ ಜೊತೆ ನಿಂತಿದೆ ಅನ್ನೋದು ಸತ್ಯಕ್ಕೆ ದೂರವಾದ ಮಾತು.
ಕಡಿಮೆ ಮತದಾನ!
ಕ್ರೈಸ್ತರ ಬಾಹುಳ್ಯವಿರುವ ತಾಳಿಪಾಡಿ-16ನೇ ವಾರ್ಡ್‌ನಲ್ಲಿ ಒಟ್ಟು 1050 ಮತದಾರರಿದ್ದು, ಅದರಲ್ಲಿ ಕೇವಲ 631 ಮಂದಿಯಷ್ಟೇ ಮತದಾನದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಅಂದಾಜು 370-380 ರಷ್ಟು ಕ್ರೈಸ್ತ ಮತದಾರರು ಎಂದು ಅಂದಾಜಿಸಲಾಗಿದೆ. ಉಳಿದಂತೆ 220-230 ರಷ್ಟು ಹಿಂದೂಗಳು ಹಾಗೂ 20 ಇತರೆ ಸಮುದಾಯದ ಮಂದಿ ವೋಟ್ ಚಲಾಯಿಸಿರುವ ಸಾಧ್ಯತೆ ಬಗ್ಗೆ ಮಾತನಾಡಲಾಗುತ್ತಿದೆ. ಬೇರೆಡೆಗೆ ಹೋಲಿಕೆ ಮಾಡಿದರೆ ಅತೀ ಕಡಿಮೆ ಮತದಾನ ನಡೆದ ವಾರ್ಡ್‌ಗಳಲ್ಲಿ ತಾಳಿಪಾಡಿ-14 (57.33%) ನಂತರದ ಸ್ಥಾನದಲ್ಲಿ ಈ ವಾರ್ಡ್ (ಶೇಕಡಾ 60.10) ಸ್ಥಾನ ಪಡೆದಿದೆ.
ಕಾಂಗ್ರೆಸ್‌ಗೆ ಕಗ್ಗಂಟಾದ ʼತ್ಯಾಜ್ಯʼ!
ಹೇಳಿಕೇಳಿ ತಾಳಿಪಾಡಿ-16 ಅನ್ನೋದು ಕಿನ್ನಿಗೋಳಿ ಪೇಟೆ ಸುತ್ತಲಿನ ಪ್ರದೇಶವನ್ನು ಹೊಂದಿದ ವಾರ್ಡ್ ಆಗಿದೆ. ಇಲ್ಲಿ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೀಸಲಾತಿ (ಹಿಂದುಳಿದ ವರ್ಗ-ಎ) ಪ್ರಕಾರ ಆ ಸಮುದಾಯಕ್ಕೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹಿರಿಯ ಕಾಂಗ್ರೆಸ್ಸಿಗ ಹಾಜಿ ಟಿಎಚ್ ಮಯ್ಯದ್ದಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಈ ಹಿಂದೆ ಗ್ರಾಮ ಪಂಚಾಯತ್ ಇರುವ ಸಮಯದಲ್ಲಿ ಕಾಂಗ್ರೆಸ್ ಇಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಬಗ್ಗೆ ಗಮನಹರಿಸಿದ್ದರೆ ಇಂದು ಸೋಲುತ್ತಿರಲಿಲ್ಲ. ಕಾರಣ, ಇಲ್ಲಿರುವ ಹೋಟೆಲ್, ವಸತಿ ಸಮುಚ್ಚಯಗಳ ಸಹಿತ ಸುತ್ತಮುತ್ತಲಿನ ಹಲವು ಕಟ್ಟಡಗಳ ಡ್ರೈನೇಜ್ ನೀರು ಬಿತ್ತ್‌ಲ್ ಪ್ರದೇಶದಲ್ಲಿ ಸಂಗ್ರಹವಾಗುತ್ತಿದೆ. ಹತ್ತು ವರ್ಷಗಳ ಹಿಂದೆ ಇಲ್ಲೊಂದು ತ್ಯಾಜ್ಯ ಸಂಸ್ಕರಣ ಘಟಕ ತೆರೆದರೂ ಈಗ ಅದು ಸಾಲದಾಗಿದೆ. ಬದಲಿಗೆ ಅಲ್ಲಿ ದಿನನಿತ್ಯ ಡ್ರೈನೇಜ್ ನೀರು ಹೊರಬಂದು ಮಲಮೂತ್ರದ ವಾಸನೆಯಲ್ಲಿ ಕೂರುವ ಪರಿಸ್ಥಿತಿ ಇಲ್ಲ.
ಆ ಪ್ರದೇಶದಲ್ಲಿ ಸುಮಾರು 50 ರಷ್ಟು ಮನೆಗಳಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತ ಪ್ರಚಾರಕ್ಕೆ ತೆರಳಿದಾಗ ಖುದ್ದು ಅವರಿಗೂ ಈ ಕಹಿ ಅನುಭವ ಎದುರಾಗಿದೆ. ಈ ಹಿಂದೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇದ್ದು, ಕ್ರೈಸ್ತ ಸಮುದಾಯದವರಾದರೂ ಸಮಸ್ಯೆ ಪರಿಹರಿಸಿಲ್ಲ ಅನ್ನೋ ಆಕ್ರೋಶವೇ ಮತದಾನದ ಫಲಿತಾಂಶದಲ್ಲಿ ಏರುಪೇರಾಗಲು ಕಾರಣವಾಯಿತು.
ಕ್ರೈಸ್ತರ ಹೆಚ್ಚಿನ ವೋಟ್ ಕಾಂಗ್ರೆಸ್‌ಗೆ!
ಯಾವ ಬಿತ್ತ್‌ಲ್ ಪ್ರದೇಶದಲ್ಲಿ ಜನರು ನರಕಯಾತನೆ ಅನುಭವಿಸುತ್ತಿದ್ದಾರೋ ಅದೇ ಪರಿಸರದ ಸುಮಾರು 40-50 ರಷ್ಟು ಇರುವ ಮನೆ ಮಂದಿ ಸಹಜವಾಗಿಯೇ ಕಾಂಗ್ರೆಸ್‌ನ ಅಸಹಾಯಕತೆ ವಿರುದ್ಧ ಮತ ಚಲಾಯಿಸಿದ್ದಾರೆ. ಹೀಗಾಗಿ ಆ ಭಾಗದ ಕ್ರೈಸ್ತರ ಸುಮಾರು 80-100 ಮತವು ಬಿಜೆಪಿಯ ಪ್ರಣೀಕ್ ಪಾಲಾಗಿದೆ ಎಂಬುದು ಲೆಕ್ಕಚಾರ. ಉಳಿದಂತೆ ಹತ್ರ ಹತ್ರ 300 ವೋಟ್‌ಗಳು ಕಾಂಗ್ರೆಸ್ ಜೋಳಿಗೆಯನ್ನೇ ತುಂಬಿದೆ.
ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ!
ತಾಳಿಪಾಡಿ-16ನೇ ವಾರ್ಡ್ ಫಲಿತಾಂಶವನ್ನೇ ಮುಂದಿಟ್ಟುಕೊಂಡು ಕ್ರೈಸ್ತ ಬಾಹುಳ್ಯ ಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ ಅನ್ನೋ ಮೂಲಕ ಇಡೀ ಕ್ರೈಸ್ತ ಸಮಾಜವೇ ತನ್ನ ಜೊತೆಗಿದೆ ಅನ್ನೋ ಹಾಗೆ ಬಿಂಬಿಸಲಾಗುತ್ತಿದೆ. ಆದರೆ, ಒಂದಂತೂ ಸತ್ಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಕ್ರೈಸ್ತ ಯುವಪಡೆಯನ್ನು ಚುನಾವಣಾ ವೀಕ್ಷಕರನ್ನಾಗಿ ಕಣಕ್ಕೆ ಇಳಿಸಿತ್ತು. ಗ್ಲೆನ್ ವಿಶಾಲ್ ಡಿಸಿಲ್ವ, ಜಾಸ್ಸೆಲ್ ಡಿಸೋಜಾ ಹಾಗೂ ಇನ್ನಿತರ ಸ್ಥಳೀಯ ಕ್ರೈಸ್ತ ಯುವಕರನ್ನು ಆ ಭಾಗದಲ್ಲಿ ಪ್ರಚಾರಕ್ಕೆ ಇಳಿಸಿತ್ತು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಬಂದ ವರದಿಯನ್ನೇ ನಂಬಿ ಕೆಲವು ಮಾಧ್ಯಮಗಳೂ ಅದನ್ನೇ ವರದಿ ಮಾಡುತ್ತಿವೆ. ವಾಸ್ತವದಲ್ಲಿ ಹೆಚ್ಚಿನ ಕ್ರೈಸ್ತ ಮತದಾರರು ಕಾಂಗ್ರೆಸ್ ಅನ್ನೇ ನೆಚ್ಚಿಕೊಂಡಿದ್ದರು ಅನ್ನೋದು ಸತ್ಯ.

ತ್ಯಾಜ್ಯಕ್ಕೆ ಮುಕ್ತಿಯ ಭರವಸೆ!
ಇತ್ತ ಕಾಂಗ್ರೆಸ್ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಕಡಬ ಪಟ್ಟಣ ಪಂಚಾಯತ್‌ನಂತೆ ಇಲ್ಲೂ ಗೆಲ್ಲಬಹುದು ಅನ್ನೋ ಲೆಕ್ಕಚಾರವಿತ್ತೇನೋ. ಆದರೆ, ಯುವ ನಾಯಕ ಮಿಥುನ್ ರೈ ತಾನೊಬ್ಬನೇ ʼಕಿಂಗ್ ಮೇಕರ್ʼ ಆಗಲು ಹೋಗಿ, ಪಕ್ಷದ ಇತರ ನಾಯಕರನ್ನು ವಿಶ್ವಾಸಕ್ಕೆ ಪಡೆಯದೇ ಕೆಲಸ ಮಾಡಿದ್ದಾರೆ ಅನ್ನೋ ಆರೋಪವೂ ಇದೆ. ಇದೆಲ್ಲದರ ನಡುವೆ ತಾಳಿಪಾಡಿ-16ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಆಗದ ತ್ಯಾಜ್ಯ ಘಟಕ, ಬಿಜೆಪಿ ಆರಿಸಿ ಕಳಿಸಿದರೆ ಮಾಡಿಕೊಡುವುದಾಗಿ ಭರವಸೆ ಇತ್ತಿದ್ದೇ ಬಿಜೆಪಿ ಪಾಲಿಗೆ ವರವಾಗಿದೆ.
ಪ್ರತಿಷ್ಠೆಯ ಕಣವಾಗಿತ್ತು! ಯಾಕೆ ಗೊತ್ತೇ?
ಕಿನ್ನಿಗೋಳಿ ಪೇಟೆಯ ತಾಳಿಪಾಡಿ-16 ವಾರ್ಡ್‌ನಲ್ಲಿ ಇನ್ನಷ್ಟೇ ರಾಜಕೀಯದಲ್ಲಿ ಬೆಳೆಯುತ್ತಿರುವ ಪ್ರಣೀಕ್ ಅವರನ್ನು ಕಣಕ್ಕೆ ಇಳಿಸಿದ್ದು, ಅವರ ಗೆಲುವಿಗಾಗಿ ಇನ್ನಿಲ್ಲದ ಎಫರ್ಟ್ ಹಾಕಲಾಗಿದೆ. ಶಾಸಕ, ಸಂಸದರು ಕೂಡಾ ಅವರ ಪರವಾಗಿ ಕೆಲಸ ಮಾಡಿದ್ದಾರೆ. ಕಾರಣ, ಪ್ರಣೀಕ್ ಮೂಲತಃ ಆರ್‌ಎಸ್‌ಎಸ್‌ನಿಂದ ಬಂದಿರುವ ಯುವಕನಾಗಿದ್ದು ಹೀಗಾಗಿ ಬಿಜೆಪಿ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿ ಮತ ಪ್ರಚಾರಕ್ಕೆ ಇಳಿದಿತ್ತು. ಕೊನೆಯದಾಗಿ 12 ವೋಟಿನ ಅಂತರದಲ್ಲಿ ಗೆಲವನ್ನು ಪಡೆದಿದ್ದಾರೆ.
ಶಾಲೆಟ್ ಸೈಲೆಂಟ್, ಮಿಥುನ್ ಡಾಮಿನೆಂಟ್!
ಇತ್ತೀಚೆಗೆ ಕರ್ನಾಟಕ ಸರ್ಕಾರದ ಪರಿಸರ-ಪವಾಸೋದ್ಯಮ ಮಂಡಳಿಯ (Eco-Tourism Board) ಅಧ್ಯಕ್ಷರಾದ ನಂತರ ಶಾಲೆಟ್ ಪಿಂಟೋ ತಾನಾಯಿತು ತನ್ನ ಹುದ್ದೆಯಾಯಿತು ಅನ್ನೋ ಹಾಗೆ ಇದ್ದಾರೆ. ಕಿನ್ನಿಗೋಳಿಯವರೇ ಆದರೂ ಕನಿಷ್ಠ ಕ್ರೈಸ್ತ ಬಾಹುಳ್ಯ ಪ್ರದೇಶದಲ್ಲೂ ಮತ ಪ್ರಚಾರಕ್ಕೆ ತೆರಳಿಲ್ಲ ಅನ್ನೋ ಮಾತಿದೆ. ಇದು ಮಿಥುನ್ ಬಗೆಗಿನ ಅಸಮಾಧಾನ ಅನ್ನೋದು ಕಾಂಗ್ರೆಸ್ ಪಾಳಯದಲ್ಲಿ ಗುಟ್ಟಾಗಿ ಉಳಿದಿಲ್ಲ.
ಇನ್ನು ಬಿಜೆಪಿ ಪರ ಸೋಶಿಯಲ್ ಮೀಡಿಯಾಗಳು ಹೇಳುವ ಪ್ರಕಾರ 1050 ಮತದಾರರಲ್ಲಿ 700 ಮಂದಿ ಕ್ರೈಸ್ತರಿದ್ದು, 300 ಮಂದಿಯಷ್ಟೇ ಅಲ್ಲಿ ಹಿಂದೂಗಳಿರುವುದಾಗಿದೆ. ಆದರೆ, ಈ ವಾರ್ಡ್‌ನಲ್ಲಿ ಮತದಾನ ಚಲಾಯಿಸಿದವರ ಸಂಖ್ಯೆ ಮಾತ್ರ ಕೇವಲ 631 ಆಗಿದೆ. ಒಟ್ಟಿನಲ್ಲಿ, ಬಿಜೆಪಿ ಹೊಸ ಪ್ರೊಪಗಂಡವನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆ ಮೂಲಕ ಬಿಂಬಿಸಲು ಹೊರಟಿದೆ. ಇಡೀ ಕ್ರೈಸ್ತ ಸಮುದಾಯ ತಮಗೆ ವೋಟ್ ಹಾಕಿದೆ ಅನ್ನೋದಾಗಿ ಪ್ರಚುರಪಡಿಸುತ್ತಾ, ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಅದನ್ನೇ ನಂಬಿ ಬಿಜೆಪಿಯ ಶಾಸಕರು, ಹಿರಿಯ ನಾಯಕರು ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳುತ್ತಿದ್ದಾರೆ. ವಾಸ್ತವದಲ್ಲಿ ಅದು ಸತ್ಯಕ್ಕೆ ದೂರವಾದದ್ದು. ಇಂದಿಗೂ ಕ್ರೈಸ್ತರ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ನಲ್ಲೇ ಇದೆ. ಆದರೆ, ಕಾಂಗ್ರೆಸ್ ತನ್ನ ಅಧಿಕಾರದಲ್ಲಿ ಮಾಡಿದ ತಪ್ಪಿಗಾಗಿ ತಕ್ಕ ಪಾಠ ಕಲಿತಿದೆ.




