ಇಸ್ಲಾಮಾಬಾದ್: ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲಿಮರ 200 ಮನೆಗಳನ್ನು ಕರ್ನಾಟಕ ಸರ್ಕಾರ ನೆಲಸಮ ಮಾಡಿದ್ದಕ್ಕೆ ಕೇರಳ ಸರ್ಕಾರ ಬೇಸರ ವ್ಯಕ್ತಪಡಿಸಿತ್ತು. ಇದೀಗ ಪಾಕಿಸ್ತಾನ ಕೂಡ ಕಳವಳ ವ್ಯಕ್ತಪಡಿಸಿದೆ.
ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಇಲಾಖೆ, ‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳವು ತೀವ್ರ ಕಳವಳದ ವಿಷಯವಾಗಿದೆ. ಅಲ್ಲಿ ಕ್ರಿಸ್‌ಮಸ್ ಆಚರಣೆ ಮೇಲೆ ದಾಳಿಗಳು ಆಗಿವೆ. ಸರ್ಕಾರಿ ಪ್ರಾಯೋಜಕತ್ವದಿಂದ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಹಾಗೂ ಮುಸ್ಲಿಮರ ಗುಂಪು ಹತ್ಯೆ ನಡೆದಿವೆ’ ಎಂದು ಆರೋಪಿಸಿದೆ
ಬೆಂಗಳೂರು ಘಟನೆಯನ್ನು ಪಾಕಿಸ್ತಾನ ನೇರವಾಗಿ ಪ್ರಸ್ತಾಪಿಸದೇ ಹೋದರೂ ರಾಷ್ಟ್ರ ಮಟ್ಟದಲ್ಲಿ ಕೋಗಿಲು ಬಡಾವಣೆಯ ಅನಧಿಕೃತ ಮನೆ ತೆರವು ಕಾರ್ಯಾಚರಣೆ ಭಾರಿ ಚರ್ಚೆಯಾಗುತ್ತಿದೆ. ಹೀಗಾಗಿ ಇದೇ ಘಟನೆಯನ್ನು ಪಾಕಿಸ್ತಾನ ಪ್ರಸ್ತಾಪಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇದರ ಬೆನ್ನಲ್ಲೇ ಪಾಕಿಸ್ತಾನದ ಆರೋಪಗಳಿಗೆ ಭಾರತದ ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.
ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ‘ಪಾಕ್ ಹೇಳಿಕೆ ಕಪೋಲಕಲ್ಪಿತ. ಅಲ್ಪಸಂಖ್ಯಾತರ ಮೇಲಿನ ದಾಳಿ ವಿಷಯದಲ್ಲಿ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿರುವ ಆ ದೇಶದ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ. ವಿವಿಧ ಧರ್ಮಗಳ ಅಲ್ಪಸಂಖ್ಯಾತರನ್ನು ಪಾಕಿಸ್ತಾನ ಭಯಾನಕವಾಗಿ ಮತ್ತು ವ್ಯವಸ್ಥಿತವಾಗಿ ಬಲಿಪಶುಗಳನ್ನಾಗಿ ಮಾಡುತ್ತಿರುವುದು ಸ್ಥಾಪಿತ ಸತ್ಯವಾಗಿದೆ. ಅದು ಇನ್ನೊಬ್ಬರತ್ತ ಎಷ್ಟೇ ಬೆರಳು ತೋರಿಸಿದರೂ ವಾಸ್ತವವು ಬದಲಾಗುವುದಿಲ್ಲ’ ಎಂದಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಹೀರ್ ಅಂದ್ರಾಬಿ ಹೇಳಿಕೆ ನೀಡಿ, ‘ಭಾರತದಲ್ಲಿ ಕ್ರಿಸ್‌ಮಸ್ ವೇಳೆ ಇತ್ತೀಚೆಗೆ ವಿಧ್ವಂಸಕ ಘಟನೆಗಳು ನಡೆದಿವೆ. ಹಾಗೆಯೇ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸರ್ಕಾರಿ ಪ್ರಾಯೋಜಿತ ಅಭಿಯಾನಗಳು ನಡೆಯುತ್ತಿವೆ. ಅವರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ಪದೇ ಪದೇ ಗುಂಪು ಹತ್ಯೆಗಳು ನಡೆದಿವೆ. ವಿಶೇಷವಾಗಿ ಮುಹಮ್ಮದ್ ಅಖ್ಲಾಕ್ ಪ್ರಕರಣ ಇದಕ್ಕೆ ಸಾಕ್ಷಿ. ಇದರಲ್ಲಿ ಸರ್ಕಾರವೇ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡಿದೆ. ಮುಸ್ಲಿಮರಲ್ಲಿ ಭಯ ಮತ್ತು ಪರಕೀಯತೆಯನ್ನು ಹೆಚ್ಚಿಸಿದೆ’ ಎಂದಿದ್ದಾರೆ.
ಭಾರತದಲ್ಲಿ ಕ್ರಿಸ್‌ಮಸ್ ವೇಳೆ ಛತ್ತೀಸ್‌ಗಢ, ಉತ್ತರ ಪ್ರದೇಶ, ಕೇರಳ ಹಾಗೂ ಅಸ್ಸಾಂನಲ್ಲಿ ದಾಳಿ ಆಗಿದ್ದವು. ಮೊಹಮ್ಮದ್ ಎಂಬ ವ್ಯಕ್ತಿ ಉತ್ತರ ಪ್ರದೇಶದಲ್ಲಿ 2015ರಲ್ಲಿ ಗುಂಪು ಥಳಿತದಿಂದ ಸಾವನ್ನಪ್ಪಿದ್ದ. ಇತ್ತೀಚೆಗೆ ಆತನ ಹತ್ಯೆ ಆರೋಪಿಗಳ ಮೇಲಿನ ಆರೋಪಗಳನ್ನು ಕೈಬಿಡಲಾಗಿತ್ತು. ಇದನ್ನು ಉದ್ದೇಶಿಸಿ ಪಾಕ್ ಈ ಹೇಳಿಕೆ ನೀಡಿದೆ.



