ಪುತ್ತೂರು ಕೃಷ್ಣನ ನವರಂಗಿ ಆಟ, ಡಿಎನ್ಎ ಟೆಸ್ಟ್ನಲ್ಲಿ ಅಪ್ಪ ಎಂದು ಕನ್ಫರ್ಮ್ ಆದರೂ ಮದುವೆ ಆಗಲ್ವಂತೆ!
ಮಂಗಳೂರು: ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇನೆ, ಪ್ರಭಾಕರ ಭಟ್ ಎಲ್ಲ ಕಡೆ ಹೇಳುತ್ತಾರೆ ಹಿಂದೂಗಳು ಮಕ್ಕಳು ಮಾಡಿ ಎಂದು, ಆದರೆ ಅವರು ಮದುವೆಯಾಗಿ ಮಕ್ಕಳು ಮಾಡಿ ಎಂದು ಹೇಳಿಲ್ಲ ಅಂತ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಅನ್ಯಾಯಕ್ಕೊಳಗಾದ ಯುವತಿ, ಮಗು ಹಾಗೂ ಯುವತಿಯ ಪೋಷಕರ ಜತೆ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಡಿಎನ್ಎ ಪರೀಕ್ಷೆಯಲ್ಲಿ ಸಂತ್ರಸ್ತೆ ಪೂಜಾಳ ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಸಾಬೀತಾದರೂ ಅವರು ಈಕೆಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಬದಲಾಗಿ 50 ಲಕ್ಷ ರೂ.ಗಳ ಪರಿಹಾರ ನೀಡಿ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಇದಕ್ಕೆ ಯುವತಿಯಾಗಲಿ ಆಕೆಯ ಕುಟುಂಬವಾಗಲಿ ಒಪ್ಪುವುದಿಲ್ಲ. ಅವರಿಗೆ ಬೆಂಬಲವಾಗಿ ಸಮಾಜದ ಎಲ್ಲಾ ವರ್ಗದ ಜನ ಅವರ ಜತೆಗಿದೆ ಎಂದರು.
ಕೃಷ್ಣ ಜೆ. ರಾವ್ ಯುವತಿ ಜತೆ ವಿವಾಹ ಆಗಿ ಆ ಮಗುವಿಗೆ ತಂದೆಯ ಸ್ಥಾನಮಾನ ನೀಡುವ ಆಶಾಭಾವನೆಯೊಂದಿಗೆ ಆತನಿಗೆ ಜಾಮೀನು ದೊರಕಿ ಆತ ಆರಾಮವಾಗಿ ಓಡಾಡಿಕೊಂಡಿದ್ದರೂ, ನಾವು ಈವರೆಗೆ ಸುಮ್ಮನಿದ್ದೆವು. ಆತನ ತಾಯಿ ನನ್ನ ಮೇಲೆ ಹಾಗೂ ಯುವತಿಯ ತಾಯಿ ಮೇಲೆ ಮಾನ ಹರಾಜು ಪ್ರಕರಣ ದಾಖಲಿಸಿದ್ದಾರೆ. ಆದರೆ ವಾಸ್ತವದಲ್ಲಿ ಇಲ್ಲಿ ಓರ್ವ ಯುವತಿ ಮತ್ತು ಆಕೆಯ ಕಟುಂಬದವರ ಮಾನ ಹರಾಜು ಹಾಕಲಾಗಿದೆ ಎಂದವರು ಹೇಳಿದರು.
ಕರಾವಳಿಯಲ್ಲಿ ಹಿಂದು ಸಮಾಜದ ಬಗ್ಗೆ ಮುಖಂಡರು, ರಾಜಕೀಯ ನೇತಾರರು ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆಯೇ ವಿನಃ ಇಂತಹ ಸನ್ನಿವೇಶದಲ್ಲಿ ಸಿಲುಕಿದವರನ್ನು ಪಾರು ಮಾಡುವ ಬಗ್ಗೆ ನೆರವಿಗೆ ಧಾವಿಸುತ್ತಿಲ್ಲ. ಹಾಗಾಗಿ ನಾವು ಬೇರೆ ಸಮುದಾಯದವರನ್ನೂ ಧ್ವನಿ ಎತ್ತಲು ಆಹ್ವಾನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಶಕ್ತಿ ಕೇಂದ್ರ ಆಗಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇನೆ. ಇದೇ ಕಾರಣಕ್ಕೆ ಜ.24 ರಂದು ಕಲ್ಲಡ್ಕದಲ್ಲೇ ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.
ಮಗುವಿನ ತಂದೆ ಕೃಷ್ಣ ಜೆ.ರಾವ್ ಯಾವ ಕಾರಣಕ್ಕೆ ಪೂಜಾಳನ್ನು ತಿರಸ್ಕರಿಸುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ ಅರ್ಥಮಾಡಿಕೊಂಡಿದ್ದ ಇವರಿಬ್ಬರ ಸರಸದಲ್ಲಿ ಮಗು ಜನಿಸಿದ ಬಳಿಕ ಮತ್ತೆ ಆಕೆಯನ್ನು ದೂರ ಮಾಡುವುದರಲ್ಲಿ ಅರ್ಥ ಇಲ್ಲ. ಆಕೆ ಯಾವುದೇ ಕಾರಣಕ್ಕೂ ಅಬಲೆ ಅಲ್ಲ, ಆಕೆಯೂ ನಿತ್ಯವೂ ನೊಂದುಕೊಳ್ಳುತ್ತಿದ್ದು, ಆತ್ಮಹತ್ಯೆಗೂ ಯೋಚಿಸಿದ್ದಾಳೆ. ಅವಳ ಬದುಕಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು, ಮುಂದೆ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿ ಮುಂದುವರಿಯುತ್ತೇವೆ ಎಂದು ಪ್ರತಿಭಾ ಕುಳಾಯಿ ಹೇಳಿದರು.



