ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮತಿಹೀನ ಕೃತ್ಯವೊಂದು ನಡೆದಿದ್ದು, ಚಾಕು ಇರಿತಕ್ಕೊಳಗಾಗಿದ್ದ ಕಾಳಮ್ಮ ನಗರದ ರಂಜಿತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಸಂಘಟನೆಗಳು ಯಲ್ಲಾಪುರ ಬಂದ್ಗೆ ಕರೆ ನೀಡಿವೆ.
ಆರೋಪಿ ರಫೀಕ್ ಎಂಬ ವ್ಯಕ್ತಿ ರಂಜಿತಾ ಎಂಬುವವರ ಕುತ್ತಿಗೆಗೆ ಚಾಕು ಹಾಕಿ ಭೀಕರವಾಗಿ ಹಲ್ಲೆ ನಡೆಸಿದ್ದ. ಇದರಿಂದಾಗಿ ಆಕೆಯ ಶ್ವಾಸಕೋಶಕ್ಕೆ ತೀವ್ರ ಗಾಯವಾಗಿತ್ತು. ತಕ್ಷಣವೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ಆದರೆ, ಅತೀವ ರಕ್ತಸ್ರಾವದಿಂದಾಗಿ ರಂಜಿತಾ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ.
ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಎಸ್ಪಿ ದೀಪಕ್ ಎಂಎನ್ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ಏನು?
ಹತ್ತು ವರ್ಷಗಳ ಹಿಂದೆ ರಂಜಿತಾ ವಿಚ್ಛೇದನ ಪಡೆದು ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ಮಗುವಿನೊಂದಿಗೆ ವಾಸವಾಗಿದ್ದಳು. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ರಂಜಿತಾಳಿಗೆ ರಫೀಕ್ ನ ಪರಿಚಯವಾಗಿತ್ತು.
ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರ ಕುಟುಂಬಗಳ ನಡುವೆ ಸಹ ಒಳ್ಳೆಯ ಬಾಂಧವ್ಯ ಇತ್ತು. ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಹೋಗುತ್ತಿದ್ದನು. ಈ ಮಧ್ಯೆ ರಫೀಕ್ ಮದುವೆಯಾಗುವಂತೆ ರಂಜಿತಾಳನ್ನು ಒತ್ತಾಯಿಸುತ್ತಿದ್ದನು. ಅದಕ್ಕೆ ರಂಜಿತಾ ವಿರೋಧ ವ್ಯಕ್ತಪಡಿಸಿದ್ದಳು. ನಾನು ಈಗಾಗಲೇ ಮದುವೆಯಾಗಿ ಸಾಕಷ್ಟು ಅನುಭವಿಸಿದ್ದೇನೆ. ಮತ್ತೆ ಮದುವೆಯಾಗುವ ಇಷ್ಟವಿಲ್ಲ. ನಮ್ಮ ಸಂಬಂಧ ಹೀಗೆ ಇರಲಿ, ಮದುವೆ ಮಾತ್ರ ಬೇಡ ಎಂದು ಎಂದು ಹೇಳಿದ್ದಳು
ರಂಜಿತಾಳ ಮಾತಿನಿಂದ ಕೋಪಗೊಂಡಿದ್ದ ರಫೀಕ್ ಎಂದು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ರಂಜಿತಾಳನ್ನು ಅಡ್ಡಗಟ್ಟಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ರಂಜಿತಾ ಕೋಪದಿಂದ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ರಫೀಕ್ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಪ್ರಕರಣ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ರಫೀಕ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬಿಜೆಪಿ ಮುಖಂಡ ಹರಿಪ್ರಕಾಶ್ ಕೋಣೆಮನೆ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ‘ಹಿಂದೂ ಮಹಿಳೆಯ ಕಗ್ಗೊಲೆ ಸಹಿಸಲಾಗದು. ಒಂದು ವರ್ಷದ ಹಿಂದೆ ಅಪ್ರಾಪ್ತ ಯುವತಿಯ ಮೇಲೆ ಹಲ್ಲೆ ನಡೆದಾಗ ಪ್ರಭಾವಿಗಳು ದೂರು ನೀಡದಂತೆ ತಡೆದಿದ್ದರು. ಪಾಲಕರ ಅಸಹಾಯಕತೆ ಹಾಗೂ ಭೀತಿಯ ಕಾರಣಕ್ಕೆ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಸಾಧ್ಯವಾಗಿರಲಿಲ್ಲ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಪೊಲೀಸರು ನಿಷ್ಕ್ರಿಯತೆ ತೋರಬಾರದು ಅಥವಾ ಯಾವುದೇ ಪ್ರಭಾವಿಗಳ ಒತ್ತಡದ ಕಾರಣಕ್ಕೆ ಕ್ರಮ ವಿಳಂಬವಾಗಿ ಹಿಂದೂ ಸಮಾಜದ ತಾಳ್ಮೆಯನ್ನು ಯಾರೂ ಕೂಡ ಪರೀಕ್ಷೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂ ಮಹಿಳೆಯ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಯ ಶೀಘ್ರ ಬಂಧನಕ್ಕೆ ಆಗ್ರಹಿಸಿ ಭಾನುವಾರ (ನಾಳೆ) ಯಲ್ಲಾಪುರ ಪಟ್ಟಣ ಬಂದ್ಗೆ ಕರೆ ನೀಡಲಾಗಿದೆ. ವಿವಿಧ ಹಿಂದೂ ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿದ್ದು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿವೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.



