Flash News

PFI ಜೊತೆ ಬಜರಂಗದಳ ಹೋಲಿಕೆ: ಸಿಎಂ-ಡಿಸಿಎಂ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್ ಆದೇಶ

2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಎಚ್‌ಪಿ ಪಿಎಫ್‌ಐಯಂತೆ ಎಂದು ಹೋಲಿಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಿಹೆಚ್ ಪಿ ಕಾರ್ಯಕರ್ತ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ತನಿಖೆಗೆ ಮುಂಬೈ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.

ಮುಂಬೈ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ ವಿಹೆಚ್ ಪಿ ಕಾರ್ಯಕರ್ತನ ದೂರಿಗೆ ಸಂಬಂಧಿಸಿದಂತೆ ಫೆಬ್ರವರಿ 17 ರೊಳಗೆ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಲು ಭಾಂಡಪ್ ಪೊಲೀಸರಿಗೆ ಸೂಚಿಸಿದೆ.

ಕರ್ನಾಟಕ ಕಾಂಗ್ರೆಸ್‌ನ ಈ ಪ್ರಣಾಳಿಕೆಯನ್ನು ಮೇ 2, 2023 ರಂದು ಬಿಡುಗಡೆ ಮಾಡಿತ್ತು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು 2023ರಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ ಕಾಂಗ್ರೆಸ್ ಹೇಳಿತ್ತು.

ಅರ್ಜಿದಾರರ ವಾದವೇನು?: ಮುಂಬೈನ ಭಜರಂಗದಳದ ಕಾರ್ಯಕರ್ತರೊಬ್ಬರು ವಕೀಲ ಸಂತೋಷ್ ದುಬೆ ಅವರ ಮೂಲಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷವು ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದ್ದಾರೆ. ಇದು ಸಂಘಟನೆಗೆ ಚ್ಯುತಿ ತರುವ ಕಾರ್ಯ. ಅಲ್ಲದೇ, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಹೋಲಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ: ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯ ಸೆಕ್ಷನ್ 3 ರ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಮಾತ್ರ ಯಾವುದೇ ಸಂಘಟನೆಯನ್ನು ನಿಷೇಧಿಸುವ ಅಧಿಕಾರವಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಭರವಸೆ ಸುಳ್ಳು ಮತ್ತು ಮಾನಹಾನಿಕರವಾಗಿದೆ. ಇದರಿಂದ ಭಜರಂಗದಳದ ಬೆಂಬಲಿಗರಿಗೆ ನೋವುಂಟು ಮಾಡಲಾಗಿದೆ ಎಂದು ಅರ್ಜಿದಾರರು ದೂರಿನಲ್ಲಿ ಹೇಳಿದ್ದಾರೆ.

ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹ: ಇದರಿಂದ ಕಾಂಗ್ರೆಸ್​, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.