Flash News

ಶಾಮನೂರು ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಡ

ದಾವಣಗೆರೆ ದಕ್ಷಿಣದಲ್ಲಿ 80 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತಗಳು, ಕಾಂಗ್ರೆಸ್ ನಿಂದ ಪ್ರತಿ ಬಾರಿ ವಂಚನೆ’

ಕಾಂಗ್ರೆಸ್ ಹಿರಿಯ ನಾಯಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ಇತ್ತೀಚೆಗೆ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಸಾಮಾಜಿಕ ನ್ಯಾಯ ಪರಿಕಲ್ಪನೆಯಂತೆ ಶಾಸಕ ಸ್ಥಾನಕ್ಕೆ ಈ ಬಾರಿ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ವಕ್ಫ್ ಪರಿಷತ್ ಸದಸ್ಯ ಅಬ್ದುಲ್ ಘನಿ ತಾಹಿರ್ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.‌

ದಾವಣಗೆರೆಯಲ್ಲಿ ಪತ್ರಿಕಾ ಹೇಳಿಕೆ ನೀಡಿ ಒತ್ತಾಯಿಸಿರುವ ಅವರು “ದಾವಣಗೆರೆ ದಕ್ಷಿಣಕ್ಕೆ ಕ್ಷೇತ್ರದಲ್ಲಿ ಹಿಂದಿನಿಂದಲೂ ನಾವು ಕಾಂಗ್ರೆಸ್ಸನ್ನು ಬೆಂಬಲಿಸುತ್ತಾ ಬಂದಿದ್ದು ಶಾಮನೂರ್ ಶಿವಶಂಕರಪ್ಪ ಸತತವಾಗಿ ಗೆದ್ದು ಬಂದಿದ್ದರು. ಈಗ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಗಣನೀಯವಾಗಿವೆ. ಹಾಗೂ ಸಾಮಾಜಿಕ ನ್ಯಾಯ ಪರಿಕಲ್ಪನೆ ಹಿನ್ನಲೆಯಲ್ಲಿ ಈ ಬಾರಿ ವಿಧಾನಸಭೆ ಮರುಚುನಾವಣೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 80000ಕ್ಕೂ ಹೆಚ್ಚಿನ ಮತಗಳಿದ್ದು ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ನಿರ್ಣಾಯಕವಾಗಿದೆ. ಆದರೂ ಇದುವರೆಗೂ ಸಹ ತಮ್ಮ ಹಕ್ಕು ಪಡೆಯುವಲ್ಲಿ ವಿಫಲವಾಗಿದೆ. ಪ್ರತಿಬಾರಿ ಅವಕಾಶಕ್ಕೆ ಎದುರು ನೋಡುತ್ತಿದ್ದೇವೆ. ಆದರೆ, ನಮಗೆ ಅವಕಾಶ ಸಿಗದೆ ವಂಚಿತರಾಗಿದ್ದೇವೆ. ಪ್ರತಿ ಬಾರಿಯು ಅವಕಾಶ ಕೇಳಿದಾಗ ಮುಂದಿನ ಬಾರಿ ಎನ್ನುವ ಬಹು ದೊಡ್ಡ ಭರವಸೆ ನೀಡಿ ನಮ್ಮ ಸಮುದಾಯ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ. ಇದರಿಂದ ನಮ್ಮ ಸಮುದಾಯಕ್ಕೆ ತುಂಬ ನೋವು ತಂದಿದೆ. ಈ ಬಾರಿ ಕಾಂಗ್ರೆಸ್ ಪಕ್ಷದ ವರಿಷ್ಠರು ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡುವ ಮೂಲಕ ಬಸವಣ್ಣ ಮತ್ತು ಅಂಬೇಡ್ಕರ ಅವರ ಆಶಯದಂತೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು” ಆಗ್ರಹಿಸಿದ್ದಾರೆ.

“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಮತಗಳು ಹೆಚ್ಚಾಗಿದೆ. ಈ ಸಮುದಾಯಗಳು ನಿರ್ಧಾರ ಮಾಡಿ ಮತ ನೀಡಿದ ವ್ಯಕ್ತಿ ಇಲ್ಲಿ ಆಯ್ಕೆಯಾಗಲು ಸಾಧ್ಯ. ಆದರೆ, ಈ ಸಮುದಾಯಗಳಿಂದ ಮಾತ್ರ ಜನಪ್ರತಿನಿಧಿ ಇಲ್ಲಿ ಆಯ್ಕೆಯಾಗುತ್ತಿಲ್ಲ. ಸಾಮಾಜಿಕ ನ್ಯಾಯದ ಕಲ್ಪನೆ ವಿರುದ್ಧವಾಗಿದೆ. ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

“ಇತ್ತೀಚೆಗೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ತನ್ನ ಸಹೋದರನಿಗೆ ಟಿಕೆಟ್ ಕೇಳಿರುವುದು ನ್ಯಾಯ ಸಮ್ಮತವಲ್ಲ. ಅದನ್ನು ಅವರು ಅರಿತು ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗುವಂತೆ ಮಾಡಬೇಕು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬ ವ್ಯಕ್ತಿ ಜನಪ್ರತಿನಿಧಿ (ವಿಧಾನಸಭಾ ಸದಸ್ಯ) ಆಗಲು ಕೈ ಜೋಡಿಸಿ ಮುಸ್ಲಿಂ ಅಭ್ಯರ್ಥಿಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.‌