Flash News

ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ ಮಾಡಿದ್ದಾಳೆ, ಆಕೆ ವಿರುದ್ಧ 9 ಕೇಸ್‌ ಇದೆ: ಪೊಲೀಸ್ ಆಯುಕ್ತ ಶಶಿಕುಮಾರ್‌

ಹುಬ್ಬಳ್ಳಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪೂರ್ವ ನಡೆಯುವ ಕುಟುಂಬ ಸದಸ್ಯರ ಮ್ಯಾಪಿಂಗ್ ಸಂದರ್ಭ ನಡೆದ ಗಲಾಟೆ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.

ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ಕೆಲ ದಿನಗಳ ಹಿಂದೆ ಬ್ಲಾಕ್ ಮಟ್ಟದ ಅಧಿಕಾರಿ(ಬಿಎಲ್‌ಒ) ಜೊತೆ ಸಂಬಂಧವಿಲ್ಲದ ವ್ಯಕ್ತಿಗಳು ಸಮೀಕ್ಷೆಗೆ ತೆರಳಿದ್ದರು. ಅದನ್ನು ಪ್ರಶ್ನಿಸಿದ ಅಲ್ಲಿಯ ಕುಟುಂಬ ಹಾಗೂ ಪಾಲಿಕೆ ಕಾಂಗ್ರೆಸ್ ಸದಸ್ಯೆ ಮೇಲೆ ಕೆಲವರು ಹಲ್ಲೆ ಮಾಡಿರುವ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ ಅವರ ದೂರು ಆಧರಿಸಿ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ಬಂಧಿಸಿದ್ದರು. ‘ಆ ವೇಳೆ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಮಾತು ಕೇಳಿ ಅಮಾನುಷವಾಗಿ ವರ್ತಿಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ‘ಸುಜಾತಾ ಅವರನ್ನು ವಶಕ್ಕೆ ಪಡೆಯುವಾಗ ಅವರೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ‌. ಮಹಿಳಾ ಸಿಬ್ಬಂದಿ ಹಾಗೂ ಪುರುಷ ಸಿಬ್ಬಂದಿಯನ್ನು ನೂಕಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ದೊಡ್ಡ ಮಟ್ಟದಲ್ಲಿ ಡ್ರಾಮಾ ಮಾಡಿದ್ದರು. ನಂತರ ಅವರನ್ನು ವಾಹನಕ್ಕೆ ಹತ್ತಿಸಿದಾಗ ತಾವೇ ಬಟ್ಟೆಯನ್ನು ಬಿಚ್ಚಿಕೊಂಡಿದ್ದರು. ಆಗ ನಮ್ಮ ಸಿಬ್ಬಂದಿ ಬೇರೆ ಬಟ್ಟೆ ತಂದು ಕೊಟ್ಟಿದ್ದಾರೆ’ ಎಂದರು.

‘ಸುಜಾತಾ ಅವರ ವಿರುದ್ಧ 2020ರಿಂದ 2025ರ ಅಂತ್ಯದವರೆಗೆ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ನಾಲ್ಕು ಪ್ರಕರಣಗಳು ಸೇರಿ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿವೆ. ಅವರ ನಡವಳಿಕೆ ಬಗ್ಗೆ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ಬಂಧನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದರು. ನಮ್ಮ ಸಿಬ್ಬಂದಿಗೆ ಹಲ್ಲಿನಿಂದ ಅವರೇ ಕಚ್ಚಿದ್ದಾರೆ. ನಮ್ಮಿಂದ ಯಾವುದೇ ಅಚಾತುರ್ಯ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಸ್‌ಐಆರ್ ನೆಪದಲ್ಲಿ ಬಿಎಲ್‌ಒ ಒಬ್ಬರು ಸ್ಥಳೀಯ ಬಿಜೆಪಿ ಕಾರಗಯಕರ್ತರನ್ನು ಕರೆದುಕೊಂಡು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದರು. ಆಗ ಆರಂಭವಾದ ಗದ್ದಲದಲ್ಲಿ ಸುಜಾತಾ ಹಂಡಿ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದರು. ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಶಾಸಕ ಮಹೇಶ ಟೆಂಗಿನಕಾಯಿ ಅವರು ಸುಜಾತಾ ಅವರ ಮನೆ ಎದುರು ಸಭೆ ನಡೆಸಿ, ಅವರಿಗೆ ನೀವು ಏನು ಬೇಕಾದರೂ ಮಾಟಿ ಎಂದು ಕುಮ್ಮಕ್ಕು ನೀಡಿದ್ದಾರೆ. ಈ ಮೂಲಕ ಹುಬ್ ಹುಳ್ಳಿಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.