Flash News

ಕೈ-ಕಮಲ ಮೈತ್ರಿಯಿಂದ ಬಿಜೆಪಿಗೆ ಮೇಯರ್ ಪಟ್ಟ: ಕಾಂಗ್ರೆಸ್‌ನ 12 ಸದಸ್ಯರು ಅಮಾನತು

ಮುಂಬೈ: ಅಂಬರ್‌ನಾಥ್‌ನಲ್ಲಿ ಕಾಂಗ್ರೆಸ್ ಪಕ್ಷದ ಕೌನ್ಸಿಲರ್‌ಗಳು ಬಿಜೆಪಿ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ, 12 ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಂಪಿಸಿಸಿ) ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು ಅಂಬರ್ನಾಥ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರಿಗೆ ಪತ್ರ ಬರೆದು ತಮ್ಮ ಅಮಾನತು ಬಗ್ಗೆ ತಿಳಿಸಿದ್ದಾರೆ.

ಮೈತ್ರಿಯಂತಹ ಬೆಳವಣಿಗೆ ಒಳ್ಳೆಯದಲ್ಲ. ಆದ್ದರಿಂದ ರಾಜ್ಯಾಧ್ಯಕ್ಷ ಹರ್ಷವರ್ಧನ್ ಅವರ ಸೂಚನೆಯಂತೆ ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ತನ್ನದೇ ಆದ ಚಿಹ್ನೆಯ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಅಂಬರ್ನಾಥ್ ಪುರಸಭೆಯಲ್ಲಿ 12 ಸ್ಥಾನಗಳನ್ನು ಗೆದ್ದಿದೆ ಎಂದು ಪಾಟೀಲ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ನಾವು ಕಾಂಗ್ರೆಸ್ ಚಿಹ್ನೆಯ ಮೇಲೆ ಚುನಾವಣೆಗಳಲ್ಲಿ ಸ್ಪರ್ಧಿಸಿ 12 ಸ್ಥಾನಗಳನ್ನು ಗೆದ್ದಿದ್ದೇವೆ. ಆದರೆ, ರಾಜ್ಯ ನಾಯಕತ್ವ ಅಥವಾ ರಾಜ್ಯ ಕಚೇರಿಗೆ ತಿಳಿಸದೆ, ನೀವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಿ. ಇದು ಒಳ್ಳೆಯದಲ್ಲ. ರಾಜ್ಯ ಅಧ್ಯಕ್ಷರ ಸೂಚನೆಯಂತೆ, ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದ ಅಂಬರ್ನಾಥ್ ನಗರ ಸಭೆಯಲ್ಲಿ ಬಿಜೆಪಿಯ ತೇಜಶ್ರೀ ಕರಂಜುಲೆ ಮೇಯರ್‌ ಪಟ್ಟವನ್ನು ಅಲಂಕರಿಸಿದ್ದಾರೆ. ಬಿಜೆಪಿಯ 16, ಕಾಂಗ್ರೆಸ್‌ನ 12 ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ದ ನಾಲ್ವರು ಸದಸ್ಯರ ಬೆಂಬಲವನ್ನು ಮೈತ್ರಿಕೂಟ ಹೊಂದಿದ್ದು, ನಗರಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿದೆ.

ಡಿಸೆಂಬರ್ 20 ರಂದು ನಡೆದ 60 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷವು ಅತಿ ಹೆಚ್ಚು 27 ಸ್ಥಾನಗಳನ್ನು ಗೆದ್ದುಕೊಂಡಿದ್ದರೂ ಬಹುಮತಕ್ಕೆ 4 ಸ್ಥಾನಗಳ ಅಗತ್ಯವಿತ್ತು.

ಅಂಬರ್ನಾಥ್ ವಿಕಾಸ್ ಅಘಾಡಿ ಹೆಸರಿನಲ್ಲಿ ಮೂರು ಪಕ್ಷಗಳು ಒಂದಾಗಿವೆ. ಈ ಮೈತ್ರಿಕೂಟಕ್ಕೆ ಯಾವುದೇ ಔಪಚಾರಿಕ ಪ್ರಸ್ತಾವನೆ ಇನ್ನೂ ಬಂದಿಲ್ಲ ಎಂದು ಕಾಂಗ್ರೆಸ್ ರಾಜ್ಯ ನಾಯಕತ್ವ ಹೇಳಿದೆ. ಇವು ಸ್ಥಳೀಯ ಚುನಾವಣೆಗಳಾಗಿದ್ದು ಸ್ಥಳೀಯ ನಾಯಕರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.