ರಾಜಕೀಯದಲ್ಲಿ ಅಚ್ಚರಿ ಬೆಳವಣಿಗೆಗಳು ಸಂಭವಿಸಿರುವುದು ಎಲ್ಲರನ್ನೂ ಅಚ್ಚರಿ ಮೂಡಿಸಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಬಿಜೆಪಿಯ ಮೈತ್ರಿ ತಂತ್ರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮಾಡಿದ್ದ ಬಿಜೆಪಿ, ಥಾಣೆ ಜಿಲ್ಲೆಯ ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಅಲ್ಲದೆ, ಅಕೋಲಾ ಜಿಲ್ಲೆಯ ಅಕೋಟ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಜೊತೆ ಮೈತ್ರಿಯೂ ಮಾಡಿಕೊಂಡಿದ್ದು ಬಹಿರಂಗವಾಗಿದೆ.
ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಜೊತೆಯಲ್ಲೂ ಮೈತ್ರಿ ಮಾಡಿಕೊಂಡಿರುವುದು ಬಯಲಾಗಿದೆ. ಈ ಬೆನ್ನಲ್ಲೇ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಬಿಜೆಪಿ, ಕಾಂಗ್ರೆಸ್ ಮತ್ತು AIMIM ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಗಳು ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿವೆ.
ಇನ್ನೂ ಅಕೋಟ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಬಿಜೆಪಿ AIMIM ಜೊತೆ ಮೈತ್ರಿ ಮಾಡಿಕೊಂಡಿದ್ದು ಮತ್ತೊಂದು ಅಚ್ಚರಿಯಾಗಿದೆ. ಅಕೋಟ್‌ನಲ್ಲಿ ಚುನಾವಣೆಯಲ್ಲಿ ಬಿಜೆಪಿಯ ಮಾಯಾ ಧುಲೆ ಮೇಯರ್ ಹುದ್ದೆ ಗೆದ್ದರೂ, 35 ಸದಸ್ಯರ ಪುರಸಭೆಯಲ್ಲಿ ಬಿಜೆಪಿ ಕೇವಲ 11 ಸೀಟುಗಳನ್ನು ಗೆದ್ದಿತು. ಬಹುಮತಕ್ಕೆ ಕೊರತೆಯಿಂದ ಬಿಜೆಪಿ ಅಕೋಟ್ ವಿಕಾಸ್ ಮಂಚ್ ಎಂಬ ಹೊಸ ಒಕ್ಕೂಟ ರಚಿಸಿತು. ಇದರಲ್ಲಿ AIMIMನ 5 ಸದಸ್ಯರು ಸೇರಿಕೊಂಡಿದ್ದಾರೆ. ಶಿಂಧೆ ಬಣದ ಶಿವಸೇನೆ, ಅಜಿತ್ ಪವಾರ್ NCP, ಶರದ್ ಪವಾರ್ NCP ಮತ್ತು ಬಚ್ಚು ಕಾಡು ಅವರ ಪ್ರಹಾರ್ ಜನಶಕ್ತಿ ಪಕ್ಷವೂ ಸೇರಿವೆ. ಈ ಒಕ್ಕೂಟವನ್ನು ಅಕೋಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ನಲ್ಲಿ ನೋಂದಾಯಿಸಲಾಗಿದೆ. ಇದರಿಂದ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ 25 ಸದಸ್ಯರ ಬೆಂಬಲ ಸಿಕ್ಕಿದೆ. ಕಾಂಗ್ರೆಸ್‌ನ 6 ಮತ್ತು ವಂಚಿತ್ ಬಹುಜನ್ ಅಘಾಡಿಯ 2 ಸೀಟುಗಳು ವಿರೋಧ ಪಕ್ಷದ್ದಾಗಿವೆ.
AIMIM ನಾಯಕ ಇಮ್ತಿಯಾಜ್ ಜಲೀಲ್ ಈ ಮೈತ್ರಿಯನ್ನು ನಿರಾಕರಿಸಿದ್ದಾರೆ. ನನಗೆ ಇದರ ಬಗ್ಗೆ ತಿಳಿದಿಲ್ಲ. ನಮ್ಮ ಸ್ಥಳೀಯ ನಾಯಕರನ್ನು ಕೇಳಿದ್ದೇನೆ. ಯಾವುದೇ ಬೆಲೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ನಾಯಕರು ಮೈತ್ರಿ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಶಿವಸೇನೆ (ಠಾಕ್ರೆ ಬಣ) ಸಂಸದ ಸಂಜಯ್ ರಾವತ್ ಅವರು ಬಿಜೆಪಿಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂಬರ್ನಾಥ್‌ನಲ್ಲಿ ಬಿಜೆಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ, ಅಕೋಟ್‌ನಲ್ಲಿ AIMIM ಜೊತೆ. ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುವ ಬಿಜೆಪಿ ಈ ಕೆಲಸ ಮಾಡಿದೆ ಎಂದು ಆಕ್ರೋಶ ಹೊಹಾಕಿದೆ. ಮಹಾರಾಷ್ಟ್ರದಾದ್ಯಂತ ಮೈತ್ರಿಗಳು ನಡೆಯುತ್ತಿವೆ, ಕೆಲವು ಬಹಿರಂಗ ಕೆಲವು ರಹಸ್ಯ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಅನ್ನು ಪ್ರಶ್ನಿಸಿ, ಬಿಜೆಪಿಯ ವರ್ತನೆ ಆಶ್ಚರ್ಯಕರ ಎಂದು ಹೇಳಿದರು.
ಬಿಜೆಪಿ ಈ ಆರೋಪಗಳನ್ನು ತಿರಸ್ಕರಿಸಿದೆ. ಬಿಜೆಪಿ ನಾಯಕರು, ಅಭಿವೃದ್ಧಿಗಾಗಿ ಈ ಮೈತ್ರಿ ಮಾಡಿಕೊಂಡಿದ್ದೇವೆ. ಶಿಂಧೆ ಬಣದ ಭ್ರಷ್ಟಾಚಾರದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನುಚಿತ ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳು ಮಹಾರಾಷ್ಟ್ರದ ರಾಜಕೀಯದಲ್ಲಿ ಸೈದ್ಧಾಂತಿಕ ವಿರೋಧಗಳನ್ನು ಮರೆಮಾಡಿ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳುವುದನ್ನು ತೋರಿಸುತ್ತವೆ. ಮುಂದಿನ ದಿನಗಳಲ್ಲಿ ಈ ವಿಷಯ ತೀವ್ರ ಚರ್ಚೆಗೆ ಕಾರಣವಾಗಲಿದೆ.
ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಬಣವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ ಈ ಮೈತ್ರಿಕೂಟದಲ್ಲಿ ಸೇರಿಕೊಂಡಿದೆ. ಇದರಿಂದಾಗಿ ಅಂಬರ್ನಾಥ್ ಪುರಸಭೆಯಲ್ಲಿ ಅಧಿಕಾರದ ಸಮತೋಲನ ಬದಲಾಗಿದೆ. ಬಿಜೆಪಿಯ ತೇಜಶ್ರೀ ಕಾರಂಜುಲೆ ಅವರು ಮೇಯರ್ ಸ್ಥಾನ ಗೆದ್ದಿದ್ದಾರೆ. ಶಿಂಧೆ ಬಣದ ಶಿವಸೇನೆ ವಿರೋಧ ಪಕ್ಷದ ಸ್ಥಾನಕ್ಕೆ ಬಂದಿದೆ.
ಅಂಬರ್ನಾಥ್‌ನಲ್ಲಿ 32 ಕೌನ್ಸಿಲರ್‌ಗಳ ಒಕ್ಕೂಟವು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದೆ. ಬಿಜೆಪಿಯ 14, ಕಾಂಗ್ರೆಸ್‌ನ 12 ಮತ್ತು ಎನ್‌ಸಿಪಿಯ 4 ಸದಸ್ಯರು ಸೇರಿದ್ದಾರೆ. ಈ ಮೈತ್ರಿಕೂಟವನ್ನು ಅಂಬರ್ನಾಥ್ ವಿಕಾಸ್ ಅಘಾಡಿ ಎಂದು ಹೆಸರಿಸಲಾಗಿದೆ. ಈ ಬೆಳವಣಿಗೆಯು ಶಿಂಧೆ ಬಣದಲ್ಲಿ ಅಸಮಾಧಾನ ಮೂಡಿಸಿದೆ. ಶಿಂಧೆ ಬಣದ ಶಾಸಕ ಡಾ. ಬಾಲಾಜಿ ಕಿನಿಕರ್ ಅವರು, ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮಾಡಿದ ಬಿಜೆಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಶಿವಸೇನೆಗೆ ಬೆನ್ನಿಗೆ ಚೂರಿ ಹಾಕಿದೆ ಎಂದು ಆರೋಪಿಸಿದ್ದಾರೆ.



