ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್ ಶವ ಪತ್ತೆಯಾಗಿದೆ. ಇದು ದಾವಣಗೆರೆಯ 43ನೇ ವಾರ್ಡ್ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ್ (Sankol Chandrasekhar) ಮೃತ ದೇಹ ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಅತ್ತ ಮಾಜಿ ಕಾರ್ಪೊರೇಟರ್ನ ಇಬ್ಬರು ಮಕ್ಕಳು ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ಕೂಡ ನಡೆದಿದೆ.
ದಾವಣಗೆರೆ ಹೊರವಲಯ ಹದಡಿ ರಸ್ತೆಯ ಬಳಿಯ ತೋಟದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಾಜಿ ಕಾರ್ಪೊರೇಟರ್ ಮೃತ ದೇಹ ಸಿಕ್ಕಿದೆ. ಕಾರಿನಲ್ಲಿ ಕುಳಿತು ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದಾವಣಗೆರೆಯ 43ನೇ ವಾರ್ಡ್ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ ಮೃತ ಪಟ್ಟಿದ್ದು, ಅವರ ಮಗನಾದ ಮಗ ನರೇಶ್ (20) ಹಾಗೂ ಮಗಳು ಪವಿತ್ರಾ (23) ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸಾಲ ಮಾಡಿಕೊಂಡಿದ್ದ ವಿಚಾರವಾಗಿ ಮನೆಯಲ್ಲಿ ಮಕ್ಕಳ ಜೊತೆಗೆ ಜಗಳ ನಡೆದಿದೆ ಎನ್ನಲಾಗ್ತಿದೆ. ನಿನ್ನೆ ರಾತ್ರಿ ಮನೆಯಲ್ಲಿ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ ಹಾಗೂ ಮಕ್ಕಳ ಜೊತೆಗೆ ವಾಗ್ವಾದ ನಡೆದಿದ್ದು, ಬಳಿಕ ಅವ್ರು ನಾಗನೂರು ಹೊರ ವಲಯದ ತೋಟಕ್ಕೆ ಬಂದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರು ಕೂಡ ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆ ಬಳಿಕ ಸತ್ಯಾ ಸತ್ಯತೆ ಹೊರಬರಲಿದೆ.



