ಜಬಲ್ಪುರ: ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪ್ರಭಾವಿ ಮಾಡೆಲ್ ಮತ್ತು ವೃತ್ತಿಪರ ನಿರೂಪಕಿ ಹರ್ಷ ರಿಚಾರಿಯಾ ‘ಸನಾತನ ಧರ್ಮದ ಪ್ರಚಾರವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.
“ಎಲ್ಲರೂ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಇದನ್ನು ಪ್ರಚಾರ ಮಾಡಲು ಮುಂದೆ ಬರುವ ಯಾವುದೇ ಯುವಕನಿಗೆ ವಿರೋಧ ವ್ಯಕ್ತವಾಗುತ್ತದೆ” ಎಂದು 31 ರ ಹರೆಯದ ಹರ್ಷ ರಿಚಾರಿಯಾ ಅವರು ಜಬಲ್ಪುರದಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ಹೇಳಿಕೆ ನೀಡಿದ್ದಾರೆ.
”ನಿರಂತರ ಟೀಕೆ, ಮಾನಸಿಕ ಒತ್ತಡ ಮತ್ತು ವೈಯಕ್ತಿಕ ನಿಂದನೆಗಳಿಂದ ಧಾರ್ಮಿಕ ಮಾರ್ಗದಿಂದ ದೂರ ಸರಿದು ತನ್ನ ಹಿಂದಿನ ಜೀವನಕ್ಕೆ ಮರಳುವಂತೆ ಮಾಡಿದೆ ಎಂದು ಹೇಳಿದ್ದಾರೆ.
ತನ್ನ ಹಿಂದಿನ ವೃತ್ತಿ ಜೀವನಕ್ಕೆ ಮರಳುವ ಮೊದಲು ಜನವರಿ 18 ರಂದು, ನಾನು ಪ್ರಯಾಗರಾಜ್ನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತೇನೆ ಮತ್ತು ಹರ್ ಹರ್ ಮಹಾದೇವ್ ಅನ್ನು ಜಪಿಸುತ್ತೇನೆ. ಬಳಿಕ ಧಾರ್ಮಿಕ ಮಾರ್ಗದ ಬಗೆಗಿನ ನನ್ನ ಬದ್ಧತೆಯನ್ನು ಔಪಚಾರಿಕವಾಗಿ ಕೊನೆಗೊಳಿಸುತ್ತೇನೆ ಎಂದಿದ್ದಾರೆ.
“ಅವರು… ಹಿಂದೂ ರಾಷ್ಟ್ರವನ್ನು ಬಯಸುತ್ತಾರೆ, ಆದರೆ ಅವರು ಅದರ ಮುಖವಾಗಲು ಬಯಸುತ್ತಾರೆ, ಮತ್ತು ಇತರರು ಆ ಸ್ಥಾನವನ್ನು ಪಡೆಯಲು ಬಿಡುವುದಿಲ್ಲ” ಎಂದು ಹರ್ಷ ಯಾರನ್ನೂ ಹೆಸರಿಸದೆ ಹೇಳಿದ್ದಾರೆ.



