ಮಡಿಕೇರಿ:ಕಳೆದ ಕೆಲವು ದಿನದಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಕಾಲೇಜು ವಿದ್ಯಾರ್ಥಿನಿಯರ ಜೊತೆಗಿದ್ದ ಖಾಸಗಿ ಕ್ಷಣಗಳ ದೃಶ್ಯ ಚಿತ್ರೀಕರಿಸಿದ್ದ ವಿಡಿಯೋ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮೊಹಮ್ಮದ್ ಸವದ್‌ನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ವಿಡಿಯೋ ಹರಿದಾಡುತ್ತಿರುವ ಬಗ್ಗೆ ತನಿಖೆ ಶುರು ಮಾಡಿದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿ, ಆರೋಪಿ ಮೊಹಮ್ಮದ್ ಸವದ್‌ನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿರುವ ಕಾಲೇಜಿನಲ್ಲಿ ಮೊಹಮ್ಮದ್ ಸವದ್ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಈತ ಮೂಲತಃ ಮಡಿಕೇರಿ ತಾಲೂಕಿನ ನಾಪೋಕ್ಲು ನಿವಾಸಿ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿದ್ದರೂ ಕೊಡಗಿನ ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಕಾರಣ, ಅವರೊಂದಿಗೆ ಸ್ನೇಹ ಬೆಳಸಿ, ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಎನ್ನಲಾಗಿದೆ.
ಸವದ್‌ನ ಮೊಬೈಲ್ ಅಕಸ್ಮಾತಾಗಿ ಆತನ ಗೆಳೆಯರಿಗೆ ಸಿಕ್ಕಿದೆ. ಅವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಯುವತಿಯರು, ಮೂವರು ಯುವಕರು ಇರುವ ದೃಶ್ಯಗಳಿವೆ ಎನ್ನಲಾಗುತ್ತಿದೆ.
ಅಸಭ್ಯ ವಿಡಿಯೋಗಳು ವೈರಲ್ ಆದದ್ದನ್ನು ಗಮನಿಸಿದ ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಮೊಹಮ್ಮದ್ ಸವದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘‘ಸಾಮಾಜಿಕ ಜಾಲತಾಣಗಳಲ್ಲಿಇತ್ತೀಚೆಗೆ ಒಂದು ಆ್ಯಪ್/ ರೀಲ್ ಲಿಂಕ್ ಅನ್ನು ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗುತ್ತಿದೆ. ಅದರಲ್ಲಿ ಕೊಡಗಿನ ಹೆಣ್ಣು ಮಕ್ಕಳು, ಮಡಿಕೇರಿ ಮಹಿಳೆಯರು ಮತ್ತು ಯುವತಿಯರ ಬಗ್ಗೆ ಅಶ್ಲೀಲ, ಸುಳ್ಳು ಹಾಗೂ ಅತ್ಯಂತ ಅವಮಾನಕಾರಿ ಆರೋಪಗಳನ್ನು ಮಾಡಲಾಗುತ್ತಿದೆ. ಕೊಡಗಿನ ಮಹಿಳೆಯರ ಮಾನಮರ್ಯಾದೆಗೆ ಧಕ್ಕೆ ಉಂಟು ಮಾಡಿದ್ದು ಜಿಲ್ಲೆಯ ಗೌರವಕ್ಕೆ ಮಸಿ ಬಳಿಯುವ ಕೃತ್ಯವಾಗಿದೆ,’’ ಎಂದು ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನಭಟ್ ಆಕ್ರೋಶ ವ್ಯಕ್ತಪಡಿಸಿದರು.
‘‘ಸಂಬಂಧಿಸಿದ ಫೇಸ್‌ಬುಕ್ ಖಾತೆ ಹಾಗೂ ಪೋಸ್ಟ್ ಅನ್ನು ಪರಿಶೀಲಿಸಿ, ಕಿಡಿಗೇಡಿಯನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಭವಿಷ್ಯದಲ್ಲಿಇಂತಹ ಕೃತ್ಯ ನಡೆಯ ದಂತೆ ಕ್ರಮವಹಿಸಬೇಕು,’’ ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು. ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್, ಗೌರವಾಧ್ಯಕ್ಷ ಮಾದಪ್ಪ, ಪ್ರಧಾನ ಸಂಘಟನಾ ಕಾರ್ಯದರ್ಶಿ ದಾವುದ್, ಸಂಘಟನಾ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ, ಜಿಲ್ಲಾಮಹಿಳಾ ಕಾರ್ಯದರ್ಶಿ ಗೀತಾ ಹಾಗೂ ಗೌರವ ಸಲಹೆಗಾರ ಯಾದವ ರಾವ್ ಉಪಸ್ಥಿತರಿದ್ದರು.



